ಮೈಸೂರು: ಕಳೆದ ಎರಡು ವರ್ಷಗಳಿಂದ ಕೋವಿಡ್ನಿಂದಾಗಿ ಮಂಕಾಗಿದ್ದ ಹಬ್ಬದಾಚರಣೆಗಳು ಈ ಬಾರಿ ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದ್ದಕ್ಕೆ ರಾಜ್ಯದಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿದೆ. ಎರಡು ವರ್ಷಗಳ ನಂತರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬಂದಿದೆ. ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಭಕ್ತಾದಿಗಳು, ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗುಂಜನರಸಿಂಹ ದೇವರ ದರ್ಶನ ಪಡೆಯುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಪುಣ್ಯಸ್ನಾನಕ್ಕೆ ಈ ವರ್ಷ ಅವಕಾಶ ನೀಡಲಾಗಿದೆ. ವಿವಿಧ ಗ್ರಾಮದ ದೇವರ ವಿಗ್ರಹಗಳನ್ನ ತಂದು ಪೂಜೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಯುಗಾದಿಯ ಈ ಸಂದರ್ಭದಲ್ಲಿ ಕಪ್ಪಡಿ ಜಾತ್ರೆ, ಬೋಪ್ಪೆಗೌಡನಪುರ ಮಠಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಮನೆಗೆ ತೆರಳುವುದು ಇಲ್ಲಿನ ವಾಡಿಕೆ.