ಮೈಸೂರು: ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದರೂ, ಜನರು ನಿಯಮಗಳನ್ನು ಉಲ್ಲಂಘಿಸಿ ಅಪಾಯವನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ನೂತನ ತಾಲೂಕು ಸರಗೂರಿನ ಅಂಗಡಿಗಳಲ್ಲಿ ದಿನಸಿ ಪದಾರ್ಥಗಳನ್ನು ಕೊಳ್ಳಲು ಜನಜಂಗುಳಿಯಾಗುತ್ತಿದೆ. ಎಗ್ಗಿಲ್ಲದೆ ವಾಹನಗಳ ಸಂಚಾರ ದಿನೇ ದಿನೇ ಏರುತ್ತಿದೆ.
ದಿನಸಿಗಾಗಿ ನಾ ಮುಂದು ತಾ ಮುಂದು ಎಂದು ಅಂಗಡಿಗಳ ಮುಂದೆ ದೌಡಾಯಿಸುತ್ತಿರುವ ಸಾರ್ವಜನಿಕರು ಯಾವುದೇ ಸಾಮಾಜಿಕ ಅಂತರ ಕಾಪಾಡದಿರುವುದು ಸೋಂಕು ಹರಡುವ ಆತಂಕಕ್ಕೆ ಕಾರಣವಾಗಿದೆ.
ಸರಗೂರು ಪಟ್ಟಣದಲ್ಲಿ ದಿನಸಿಗಾಗಿ ಮುಗಿಬಿದ್ದ ಜನ ಕಿರು ಮಾರುಕಟ್ಟೆ:
ಮೈಸೂರಿನ ಸುಣ್ಣದಕೇರಿ ಕಿರು ಮಾರುಕಟ್ಟೆಯಲ್ಲಿ ಕೊರೊನಾಗೆ ಜನ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕದೇ ಅಸಡ್ಡೆ ತೋರುತ್ತಿದ್ದಾರೆ. ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿರುವುದರಿಂದ, ಹಾಲು, ಮಾಂಸ, ದಿನಸಿ ಅಂಗಡಿ, ತರಕಾರಿ, ಹೂ, ಹಣ್ಣು, ಮಾರಾಟ ಭರ್ಜರಿ ವ್ಯಾಪಾರವಾಗುತ್ತಿದೆ. ಆದರೆ, ಕೊರೊನಾ ಅಪಾಯವನ್ನ ಮರೆಯುತ್ತಿದ್ದಾರೆ.
100 ಜನರಲ್ಲಿ 80 ಜನರಿಗೆ ಕೊರೊನಾ:
ಸರಗೂರು ಹಾಗೂ ಕೋಟೆ ಭಾಗದ ಜನರನ್ನು ಇತ್ತೀಚೆಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, 100 ಜನರಲ್ಲಿ ಗರಿಷ್ಠ 80 ಮಂದಿಗೆ ಕೊರೊನಾ ಪಾಸಿಟಿವ್ ಬರುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಾಲೂಕಿನ ಜನರನ್ನು ಎಚ್ಚರಿಸಿದ್ದಾರೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಿದ್ದಾರೆ.