ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದ ಮೇಲೆ ನಿನ್ನೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿತ್ತು. ನಕಲಿ ನಂದಿನಿ ತುಪ್ಪದ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಮೈಮುಲ್ ಅಧಿಕಾರಿಗಳ ತಂಡ 'ಈ ಟಿವಿ ಭಾರತ' ದೊಂದಿಗೆ ಮಾತನಾಡಿದ್ದು, ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.
ಮೈಮುಲ್ ಎಂಡಿ ವಿಜಯ್ ಕುಮಾರ್ ಮಾಹಿತಿ:
ನಕಲಿ ನಂದಿನಿ ತುಪ್ಪ ಉತ್ಪಾದನಾ ಘಟಕದ ಮೇಲಿನ ದಾಳಿ ಹೇಗಾಯಿತು ಎಂಬ ಬಗ್ಗೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಮೈಮುಲ್ ಎಂಡಿ ವಿಜಯ್ ಕುಮಾರ್, ಡಿಸೆಂಬರ್ 16ರಂದು ಎಂದಿನಂತೆ ಕಚೇರಿಗೆ ಆಗಮಿಸಿದಾಗ ಬೆಳಗ್ಗೆ 11:15ರ ವೇಳೆ ಹೊಸಹುಂಡಿ ಗ್ರಾಮದಿಂದ ಒಬ್ಬರು ಕರೆ ಮಾಡಿ ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಗ ನಾನು ಅಧ್ಯಕ್ಷರೊಂದಿಗೆ ಅನುಮೋದನೆ ಪಡೆದು ಕೂಡಲೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋದೆವು. ಸ್ಥಳದಲ್ಲಿ ನಂದಿನಿ ತುಪ್ಪದಂತೆ ಕಾಣುವ ಕಲಬೆರಕೆ ಉತ್ಪನ್ನಗಳ ಪ್ಯಾಕೆಟ್ಗಳು ಸಿಕ್ಕವು. ಜೊತೆಗೆ ಡಾಲ್ಡಾ, ಪಾಮ್ ಆಯಿಲ್, ನಂದಿನಿ ಲೇಬಲ್ಗಳು, ಪ್ಯಾಕಿಂಗ್ ಮಷಿನ್, ನಂದಿನಿ ತುಪ್ಪದಂತೆ ಕಲರ್ ಬರುವಂತೆ ಮಾಡಲು ಉಪಯೋಗಿಸುತ್ತಿದ್ದ ಬಣ್ಣ ಸಿಕ್ಕಿತು. ಆಗ ಕಲಬೆರಕೆ ನಡೆಯುತ್ತಿರುವ ಕುರಿತು ಖಾತ್ರಿಯಾಯಿತು ಎಂದು ಮಾಹಿತಿ ನೀಡಿದರು.
ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದರು. ನಂತರ ಆಹಾರ ಸುರಕ್ಷತಾ ಇಲಾಖೆ ಅಂಕಿ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿದ್ದು, ಅವರು ಕೂಡ ಬಂದರು. ಗೋಡೌನ್ ನಲ್ಲಿರುವ ಎಲ್ಲ ಉತ್ಪನ್ನಗಳನ್ನು ಪರಿಶೀಲಿಸಿ, ದಾಖಲಾತಿ ಮಾಡಿಕೊಂಡು ವಶಪಡಿಸಿಕೊಂಡರು.
ನಂತರ ಲಿಖಿತವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಅವರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿ ಕೂಡಲೇ ಎಫ್ಐಆರ್ ದಾಖಲಿಸಿಕೊಂಡರು. ಈ ಕಲಬೆರಕೆ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಿ, ಕ್ರಮ ಕೈಗೊಳ್ಳಿ ಎಂದು ಅವರಲ್ಲಿ ಮನವಿ ಮಾಡಿದ್ದಾಗಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.