ಮೈಸೂರು: ಬೆಂಕಿ ಸೀಸನ್ ಮುಗಿಯುವವರೆಗೆ ಅರಣ್ಯ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಇಲ್ಲ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ ನಿವಾಸಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಬೇಸಿಗೆಯಲ್ಲಿ ಅರಣ್ಯ ಸಂರಕ್ಷಣೆ ಮಾಡುವ ಹಿನ್ನೆಲೆ ಬೆಂಕಿ ಸೀಸನ್ ಮುಗಿಯುವವರೆಗೆ ಫೀಲ್ಡಿನಲ್ಲಿ ಕೆಲಸ ನಿರ್ವಹಿಸುವ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ತಡೆ ಕೊಟ್ಟಿದ್ದೇನೆ. ಮಳೆಗಾಲ ಆರಂಭವಾದಾಗ ವರ್ಗಾವಣೆ ಪ್ರೊಸೆಸ್ ನಡೆಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಬೆಂಕಿ ಸೀಸನ್ ಮುಗಿಯೋವರೆಗೂ ವರ್ಗಾವಣೆ ಇಲ್ಲ ಅರಣ್ಯದಲ್ಲಿ ಬೆಂಕಿ ನಿಯಂತ್ರಿಸಲು ಇಲಾಖೆಯ ಫೈಯರ್ ಫೈಟರ್ಸ್ಗಳಿಂದ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಈ ಬಾರಿ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಬೆಂಕಿ ಅನಾಹುತಗಳು ಉಂಟಾಗದ ಹಾಗೆ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಕಾಂಪ್ ಯೋಜನೆ ಮುಖಾಂತರ ಕಾಡಾನೆಗಳು ಕಾಡಂಚಿನ ಪ್ರದೇಶಗಳಿಗೆ ನುಗ್ಗದಂತೆ ರೈಲ್ವೆ ಕಂಬಿಗಳನ್ನು ಹಾಕಲಾಗುವುದು. ಇದರ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ರಾಜ್ಯದ ನಿಯೋಗದೊಂದಿಗೆ ಭೇಟಿ ಮಾಡಲಾಗುವುದು. ಅಲ್ಲದೆ ಕಡಿಮೆ ದರದಲ್ಲಿ ರೈಲ್ವೆ ಕಂಬಿಗಳನ್ನು ನೀಡುವಂತೆ ರೈಲ್ವೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಲಾಗುವುದು ಎಂದರು.
ಕಾಡಿನಲ್ಲಿರುವ ಪರಿಸರ ಹಾನಿಯಾಗಿರುವ ಲಾಂಟೇನಗಳನ್ನು ತೆಗೆದುಹಾಕಲಾಗುವುದು. ನಂತರ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಕಾಡಿನಲ್ಲಿ ಪರಿಸರ ಹಸಿರಾದಷ್ಟು ಪ್ರಾಣಿಗಳಿಗೆ ಆಹಾರ ಸಿಗುತ್ತದೆ ಎಂದು ಹೇಳಿದರು.
ಇನ್ನು ರಂಗಾಯಣದ ಮುಖಾಂತರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ 'ಪರ್ವ' ಕಾದಂಬರಿಯನ್ನು ನಾಟಕಕ್ಕೆ ರೂಪಂತರಿಸಲಾಗುವುದು. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆ ಹಾಗೂ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು.