ಮೈಸೂರು: ಸಿಎಂ ಬಸವರಾಜು ಬೊಮ್ಮಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬದಲಾವಣೆ ಪ್ರಶ್ನೆ ಇಲ್ಲ, ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಮುಂದಿನ ಚುನಾವಣೆಗೆ ಬೊಮ್ಮಾಯಿ ಅವರದ್ದೇ ನೇತೃತ್ವ: ಸಚಿವ ನಿರಾಣಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅದು ಸಿಎಂ ಅವರ ಪರಮಾಧಿಕಾರ. ಅದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಬಸವರಾಜ ಬೊಮ್ಮಯಿಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ರಾಷ್ಟ್ರೀಯ ನಾಯಕರೇ ಹೇಳಿದ್ದಾರೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದ್ದು, 130 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಮೂರನೇ ಪೀಠದ ಸ್ಥಾಪನೆಯ ಹಿಂದೆ ನಾನಿಲ್ಲ'
ರಾಜ್ಯದಲ್ಲಿ ಪಂಚಮಸಾಲಿಯ ಮೂರನೇ ಪೀಠ ಸ್ಥಾಪನೆಯನ್ನ ಸಮರ್ಥಿಸಿಕೊಂಡ ಸಚಿವ ಮುರುಗೇಶ್ ನಿರಾಣಿ. ಎರಡು ಪೀಠಗಳ ಸ್ವಾಮೀಜಿಯ ಒತ್ತಡ ಕಡಿಮೆ ಮಾಡಲು ಈ ಪೀಠ ಸ್ಥಾಪನೆ ಅಗತ್ಯವಿದೆ. ಆದರೆ ಮೂರನೇ ಪೀಠದ ಹಿಂದೆ ನಾನಿಲ್ಲ. ಪೀಠ ಸ್ಥಾಪನೆಗೆ ನನ್ನ ಬೆಂಬಲವಿದೆ. ನನ್ನ ಜೊತೆ ವಚನಾನಂದ ಸ್ವಾಮೀಜಿ ಸೇರಿದಂತೆ ಹಲವಾರ ಬೆಂಬಲ ಇದೆ ಎಂದರು.
ಪೀಠ ಸ್ಥಾಪನೆ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ. ಪೀಠ ಸ್ಥಾಪನೆಯ ಯಾವುದೇ ಕಾರ್ಯಕ್ರಮಕ್ಕೆ ನಾನು ಹೋಗಿಲ್ಲ. ಸಮುದಾಯದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮದುವೆ ಸಮಾರಂಭಗಳಿಗೆ ಭಾಗಿಯಾಗಲು ಮೂರನೇ ಪೀಠ ಅವಶ್ಯಕತೆ ಇದೆ ಎಂದು ಹೇಳಿದರು.
'ಕಾಣಿಕೆ ವಾಪಸ್ ಕೇಳುವಷ್ಟು ಸಣ್ಣವನಲ್ಲ'
ಮೂರನೇ ಪೀಠದ ಸ್ಥಾಪನೆ ವಿಚಾರದ ಬಗ್ಗೆ ನಾನು ಖುದ್ದಾಗಿ ಸ್ವಾಮೀಜಿಯನ್ನ ಭೇಟಿ ಮಾಡುವುದಿಲ್ಲ. ಅವರು ಕರೆದರೆ ಹೋಗಿ ಮಾತನಾಡುತ್ತೇನೆ. ನಾನು ಕಾಣಿಕೆ ಕೊಟ್ಟಿರುವುದು ಮಠಕ್ಕೆ, ಸ್ವಾಮೀಜಿಗೆ ಕೊಟ್ಟಿಲ್ಲ. ಕೊಟ್ಟಿರುವ ಕಾಣಿಕೆಯನ್ನ ವಾಪಸ್ ಕೇಳುವಷ್ಟು ಸಣ್ಣವನೂ ನಾನಲ್ಲ. ಇಂತಹ ಮನಸ್ಥಿತಿ ನನಗಿಲ್ಲ. ನನ್ನ ಕೈಲಾದಷ್ಟು ಪೀಠಕ್ಕೆ ನೀಡಿದ್ದೇನೆ. ನಾನು ವಾಪಸ್ ಕೇಳಿದ್ದೇನೆ ಎನ್ನುವುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿದರೂ ನಾನು ಸ್ಪಷ್ಟನೆ ನೀಡುತ್ತೇನೆ ಎಂದರು.
ನಿರಾಣಿ ಸೋದರರಿಂದ ಧಮ್ಕಿ ಹಾಕಿದ್ದಾರೆ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು. ನಾವು ಸಂಸ್ಕಾರಯುತ ಮನೆತನದವರು. ಧಮ್ಕಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಪಂಚಮಸಾಲಿ ಸಮುದಾಯದ ಮೂರನೇ ಪೀಠಕ್ಕೆ ವಚನಾನಂದ ಶ್ರೀ ಬೆಂಬಲ.. ಫೆ.14ಕ್ಕೆ ಪೀಠಾರೋಹಣಕ್ಕೆ ಮುಹೂರ್ತ..