ಬೆಂಗಳೂರು :ಮೈಸೂರಿನ ಚಾಮುಂಡಿ ಬೆಟ್ಟದ (Chamundi Hill) ಆವರಣವನ್ನು ಶೀಘ್ರವೇ ಹಂಪಿ ಮಾದರಿಯಲ್ಲಿ ಹೊಸ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಮಹಿಷಾಸುರನ ಬಳಿ ಬೃಹತ್ತಾದ ವಿಜಯನಗರ ಶೈಲಿಯ ರಾಜಗೋಪುರ, ದೇವಸ್ಥಾನದ ಎದುರು ಇರುವ ಭಜನೆ ಮಂಟಪ ಹಾಗೂ ನಂದಿ ವಿಗ್ರಹ ಇರುವ ಸ್ಥಳ ಸೇರಿದಂತೆ ಇಡೀ ಚಾಮುಂಡಿ ಬೆಟ್ಟಕ್ಕೆ ಹೊಸ ಸ್ಪರ್ಶ ಸಿಗಲಿದೆ.
ಈ ಸಂಬಂಧ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಕೇಂದ್ರ ಸರ್ಕಾರದ 'ತೀರ್ಥಯಾತ್ರೆಗಳ ಪುನಶ್ಚೇತನ ಮತ್ತು ಆಧ್ಯಾತ್ಮ, ಪಾರಂಪರಿಕ ವರ್ಧನೆಯ ಯೋಜನೆ' (PRASAD scheme) ಅಡಿ 110 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕೇಂದ್ರ ಸರ್ಕಾರದಿಂದ ಅನುದಾನ ಲಭಿಸುವ ಭರವಸೆ ಸಿಕ್ಕಿದೆ. ಎರಡು ತಿಂಗಳ ಹಿಂದೆಯೇ ವಾಸ್ತು ಶಿಲ್ಪಿಯೊಬ್ಬರ ತಜ್ಞರ ತಂಡ ಚಾಮುಂಡಿ ಬೆಟ್ಟಕ್ಕೆ (Mysore Chamundi Hill) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೂತನ ಯೋಜನೆಯನ್ನು ರೂಪಿಸಿಕೊಟ್ಟಿದೆ.
ಚಾಮುಂಡಿ ಬೆಟ್ಟದ ಹೊಸ ರೂಪ ಹೇಗಿರಲಿದೆ?:ದೇಗುಲದ ಬಳಿ ಇರುವ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿ ಅವರಿಗಾಗಿ ಹೈಟೆಕ್ ಮಾದರಿಯ ಮಳಿಗೆ ತಲೆ ಎತ್ತಲಿದೆ. ದೇವಸ್ಥಾನದ ಎದುರಿರುವ ಭಜನೆ ಮಂಟಪ, ದೇವಸ್ಥಾನದ ಎಡಬದಿಯಲ್ಲಿ ಪ್ರಾಕಾರ ಆವರಣ ನಿರ್ಮಾಣ, ಮಹಾಬಲೇಶ್ವರ ದೇವಸ್ಥಾನ ಪುನರುತ್ಥಾನ, ನಾರಾಯಣ ದೇವಸ್ಥಾನಕ್ಕೆ ಹೊಸ ರೂಪ ಸಿಗಲಿದೆ.
ಮಹಿಷಾಸುರನ ಪ್ರತಿಮೆ ಬಳಿ ಬೃಹತ್ತಾದ ವಿಜಯನಗರ ಮಾದರಿಯಲ್ಲಿ ರಾಜಗೋಪುರ ನಿರ್ಮಿಸಲು ಯೋಜಿಸಲಾಗಿದೆ. ಜತೆಗೆ ಚಾಮುಂಡೇಶ್ವರಿ ದೇಗುಲಕ್ಕೆ (Mysore Chamundi Temple) ಹೋಗುವ ಮಾರ್ಗವನ್ನು ವಿಶೇಷವಾಗಿ ನಿರ್ಮಿಸಲಾಗುತ್ತದೆ. ಅಲ್ಲದೆ, ಪಾದಚಾರಿಗಳ ವಿಶೇಷ ಪಥ ನಿರ್ಮಿಸಿ ದರ್ಶನ ಪಡೆಯಲು ಅನುಕೂಲವಾಗುವಂತೆ ಮಾರ್ಗ ವಿನ್ಯಾಸವಾಗಲಿದೆ.
ನೂರಾರು ವರ್ಷಗಳ ಇತಿಹಾಸವಿರುವ ಬೃಹತ್ ನಂದಿ ವಿಗ್ರಹದ ವೀಕ್ಷಣೆಗಾಗಿ ನಂದಿ ಸುತ್ತಲೂ ವೀಕ್ಷಣಾ ತಾಣ ನಿರ್ಮಾಣಗೊಳ್ಳಲಿದೆ. ಭಕ್ತರ ವೀಕ್ಷಣಾ ತಾಣ ಮೇಲೆ ನಿಂತು ನಂದಿಯನ್ನು ನೋಡಲು ಅವಕಾಶ ಮಾಡಿಕೊಡಲಾಗುತ್ತದೆ. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳುವ ಮಾರ್ಗವನ್ನೂ ವಿನ್ಯಾಸಗೊಳಿಸಲಾಗುವುದು. ಈಗಿರುವ ಹಳೆಯ ಗೋಪುರಕ್ಕೆ ನಾವೀನ್ಯತೆ ನೀಡಿ ಎರಡೂ ಬದಿಯಲ್ಲೂ ದಿಬ್ಬಣ ನಿರ್ಮಿಸಿ ಮೆಟ್ಟಿಲುಗಳನ್ನು ಬದಲಿಸಲಾಗುತ್ತದೆ.