ಮೈಸೂರು: ಐತಿಹಾಸಿಕ ನಂಜನಗೂಡು ಗೌತಮ ಪಂಚಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಬುಧವಾರ ಮುಂಜಾನೆ 3.30ರ ಮಕರ ಲಗ್ನದಲ್ಲಿ ದಕ್ಷಿಣ ಕಾಶಿಯಲ್ಲಿ ವಿಜೃಂಭಣೆಯ ಪಂಚಮಹಾರಥೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.
ಐದು ರಥಗಳಲ್ಲಿ ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ಸ್ವಾಮಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದು, ಎರಡನೇ ರಥದಲ್ಲಿ ಪಾರ್ವತಿದೇವಿ, ಮೂರನೇ ರಥದಲ್ಲಿ ಗಣಪತಿ, ನಾಲ್ಕನೇ ರಥದಲ್ಲಿ ಷಣ್ಮುಗ ಮತ್ತು ಐದನೇ ರಥದಲ್ಲಿ ಚಂಡಿಕೇಶ್ವರ ದೇವರುಗಳ ಪ್ರತಿಷ್ಠಾಪನೆ ಮಾಡಿ ಪಂಚ ಮಹಾರಥೋತ್ಸವದ ಅದ್ಧೂರಿ ಮೆರವಣಿಗೆಯನ್ನು ನಡೆಸಲಾಯಿತು.
ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಶಾಸಕ ಹರ್ಷವರ್ಧನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಪಂಚಮಹಾರಥೋತ್ಸವದಲ್ಲಿ ದಿ. ಪುನೀತ್ ರಾಜ್ ಕುಮಾರ್ ಅವರ ಫೋಟೋ ಹಾಗೂ ಬಾವುಟ ಹಿಡಿದು ಅಭಿಮಾನಿಗಳು ಜೈಕಾರ ಕೂಗಿದರು. ಲಕ್ಷಾಂತರ ಭಕ್ತಗಣದ ಸಮ್ಮುಖದಲ್ಲಿ ಮಹಾರಥೋತ್ಸವ ನೆರವೇರಿತು.