ಮೈಸೂರು: ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದ ಕೊಲೆ ಮತ್ತು ಹಲ್ಲೆ ಪ್ರಕರಣಕ್ಕೆ ಕಾರಣ ತಿಳಿದು ಬಂದಿದೆ. ಆರೋಪಿ ಈರಣ್ಣ (45) ತನ್ನ ಪತ್ನಿ ಗರ್ಭಿಣಿಯಾಗಲು ಎದುರು ಮನೆಯ ವ್ಯಕ್ತಿ ಕಾರಣ ಎಂದು ಶಂಕಿಸಿ ಹಲ್ಲೆ ಮಾಡಿರುವುದಾಗಿ ಮಾಹಿತಿ ದೊರೆತಿದೆ.
Nanjangud navilur murder case : ಆರೋಪಿ ಈರಯ್ಯ ಕುಡಿದ ಮತ್ತಿನಲ್ಲಿ ಪತ್ನಿ ಗರ್ಭಿಣಿಯಾಗಲು ಎದುರು ಮನೆಯ ರವಿ ಎಂಬಾತನೇ ಕಾರಣ ಎಂದು ದೂಷಿಸಿ ಮೊದಲು ಮಚ್ಚಿನಿಂದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದ ಅತ್ತೆ ಗೌರಮ್ಮ ಮೇಲೂ ಮಚ್ಚು ಬೀಸಿದ್ದಾನೆ.
ನಂತರ ರವಿ ಮನೆಗೆ ನುಗ್ಗಿ ಅವರ ತಾಯಿ ನಿಂಗಮ್ಮ, ತಂದೆ ಮಾದಯ್ಯ, ಸಂಬಂಧಿಕರಾದ ಸುರೇಶ್ ಹಾಗೂ ಮಹದೇವಯ್ಯ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಓದಿ-ಅಮಲಲ್ಲಿ ಮಚ್ಚು ಬೀಸಿದ ಕುಡುಕ: ಮೈಸೂರಿನಲ್ಲಿ ಒಬ್ಬರ ಸಾವು, ಐವರ ಸ್ಥಿತಿ ಗಂಭೀರ
ಹಲ್ಲೆಯ ಕಾರಣದಿಂದ ಎಲ್ಲರೂ ರಕ್ತಸ್ರಾವದಿಂದ ಕೆಳಗೆ ಬಿದ್ದ ನಂತರ ಮಚ್ಚು ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಸ್ಥಳಕ್ಕೆ ಬಂದ ಇಬ್ಬರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ. ಇದರಿಂದ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದ್ದಾರೆ.
ಮತ್ತೋರ್ವ ಸಾವು, ಬೆಂಗಳೂರಿನ ಆಸ್ಪತ್ರೆಗೆ ಗಾಯಾಳುಗಳು :ಗಂಭೀರವಾಗಿ ಗಾಯಗೊಂಡಿದ್ದ ಎದುರು ಮನೆಯ ನಿಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆಕೆಯ ಪತಿ ಮಾದಯ್ಯ (70) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಆರೋಪಿಯ ಪತ್ನಿ ತುಂಬು ಗರ್ಭಿಣಿ ಮಹದೇವಮ್ಮ ಸೇರಿದಂತೆ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಭಯದ ವಾತಾವರಣ ಇರುವುದರಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದ್ದಾರೆ.