ಮೈಸೂರು: ಕೋವಿಡ್ ಹಿನ್ನೆಲೆ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತಿದೆ. ಆದರೂ ದೀಪಾಲಂಕಾರ ಹಾಗೂ ಪ್ರವಾಸಿ ತಾಣ ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗರಿಯತ್ತ ಜನ ಮುಖ ಮಾಡುತ್ತಿದ್ದು, ಪ್ರವಾಸೋದ್ಯಮ ಕೊಂಚ ಚೇತರಿಕೆ ಕಾಣುತ್ತಿದೆ.
ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಪ್ರವಾಸೋದ್ಯಮ ಸೊರಗಿತ್ತು. ಆದ್ರೆ ಇದೀಗ ದಸರಾ ಹಿನ್ನೆಲೆ ಮೈಸೂರು ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸರಳ ದಸರಾ ಆಚರಣೆ ಇದ್ದರೂ ಅದ್ಧೂರಿ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ.
ಪ್ರವಾಸಿಗರ ಸೆಳೆಯುತ್ತಿರುವ ದೀಪಾಲಂಕಾರ:ಈ ಬಾರಿ ದಸರೆಯಲ್ಲಿ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. 102 ಕಿ.ಮೀ ವ್ಯಾಪ್ತಿಯಲ್ಲಿ 41 ವೃತ್ತಗಳಲ್ಲಿ ವಿಶಿಷ್ಟವಾಗಿ ಹಾಗೂ ವಿಭಿನ್ನವಾಗಿ ದೀಪಾಲಂಕಾರ ಮಾಡಲಾಗಿದೆ. ಓಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಶ್ರೀಕಂಠದತ್ತ ಒಡೆಯರ್, 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ, ಗಾಂಧೀಜಿ, ಅಂಬೇಡ್ಕರ್ ಹಾಗೂ ಪ್ರಾಣಿಗಳ ಆಕೃತಿಗಳು ಸೇರಿದಂತೆ ಹಲವು ಕಲಾಕೃತಿ ದೀಪಾಲಂಕಾರದಲ್ಲಿ ಮೂಡಿವೆ. ಸಂಜೆ 6.30 ರಿಂದ 10.30 ರವರೆಗೆ ದೀಪಾಲಂಕಾರ ಇರಲಿದ್ದು, ಆಯುಧಪೂಜೆ ಹಾಗೂ ವಿಜಯದಶಮಿ ದಿನ 6.30 ರಿಂದ 11 ಗಂಟೆವರೆಗೆ ಇರಲಿದೆ. ಪ್ರವಾಸಿಗರು ದೀಪಾಲಂಕಾರ ನೋಡುತ್ತಾ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.
(Video..ಅರಮನೆ ವೇದಿಕೆಯಲ್ಲಿ ಸಂಗೀತ ದರ್ಬಾರ್.. ಇಂದು ಬಾನಿಗೆಲ್ಲ ಹಬ್ಬ..!)
ಸ್ಥಳೀಯ ತಿನಿಸು ಹಾಗೂ ಲಾಡ್ಜ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ:
ದೀಪಾಲಂಕಾರ ನೋಡಲು ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸ್ಥಳೀಯ ತಿಂಡಿ-ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಕರಿ ಹಾಗೂ ಹೋಟೆಲ್ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ 350 ರೆಸ್ಟೋರೆಂಟ್, ಹೋಟೆಲ್, 300 ಬೇಕರಿ, 60 ಸ್ವೀಟ್ ಅಂಗಡಿಗಳಿದ್ದು, ಕೋವಿಡ್ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹೋಟೆಲ್ಗಳಿಗೆ ಆಗಮಿಸುತ್ತಿದ್ದಾರೆ.
ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಲಾಡ್ಜ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ನೆಲ ಕಚ್ಚಿದ್ದ ವ್ಯವಹಾರ ಈಗ ಪ್ರವಾಸಿಗರಿಂದ ಚೇತರಿಕೆ ಕಂಡುಬರುತ್ತಿದೆ. ಮೈಸೂರಲ್ಲಿ ಒಟ್ಟು 415 ಲಾಡ್ಜ್ಗಳಿದ್ದು, 10 ಸಾವಿರ ಕೊಠಡಿಗಳಿವೆ. ಅಕ್ಟೋಬರ್ 10 ರಿಂದ 15 ರವರೆಗೆ ಈಗಾಗಲೇ ಶೇ.50 ರಷ್ಟು ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ದಸರಾ ಜಂಬೂಸವಾರಿ ವೇಳೆಗೆ ಎಲ್ಲಾ ಕೊಠಡಿಗಳು ಭರ್ತಿಯಾಗುವ ನಿರೀಕ್ಷೆ ಇದೆ. ಅಲ್ಲದೇ ಮೈಸೂರು ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಹೆಚ್ಚಿದ ವಿಮಾನಯಾನ:
ಕೊರೊನಾ ಲಾಕ್ ಡೌನ್ ಬಳಿಕ ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ವಿಮಾನಯಾನ ಸೇವೆ ಮತ್ತೆ ಗರಿಗೆದರಿದ್ದು, 1 ತಿಂಗಳಲ್ಲಿ 4500 ಮಂದಿ ಪ್ರಯಾಣ ಬೆಳೆಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿತ್ತು. ಜುಲೈನಲ್ಲಿ ಲಾಕ್ ಡೌನ್ ತೆರವುಗೊಂಡ ಬಳಿಕ ವಿಮಾನಯಾನ ಆರಂಭವಾಗಿದ್ದು, ದಸರಾ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಪ್ರವಾಸಿಗರು ವಿಮಾನಯಾನ ಸೇವೆ ಬಳಸುತ್ತಿದ್ದಾರೆ. ಹೊರ ರಾಜ್ಯದಿಂದ ಪ್ರಯಾಣಿಕರು ದಸರಾ ರಜೆಗೆ ಮೈಸೂರಿಗೆ ಆಗಮಿಸುತ್ತಿದ್ದು, ಇದರ ಜೊತೆಗೆ ಉದ್ಯಮಿಗಳು ಹೆಚ್ಚು ಓಡಾಟ ನಡೆಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಿಂದ ಇಂಡಿಗೋ, ಅಲಯನ್ಸ್ ಏರ್ ಟ್ರೂಜೆಟ್ ಏರ್ಲೈನ್ ವಿಮಾನ ಸೇವೆ ನೀಡುತ್ತಿದ್ದು, ಹೈದರಾಬಾದ್, ಕೊಚ್ಚಿ, ಚೆನ್ನೈ, ಬೆಂಗಳೂರು, ಗೋವಾ ನಗರಗಳಿಗೆ ವಿಮಾನ ಸೇವೆ ಕಲ್ಪಿಸಲಾಗಿದೆ. ರಾಜ್ಯದ ವಿಮಾನ ನಿಲ್ದಾಣಗಳನ್ನು ಬಳಕೆ ಮಾಡಿಕೊಂಡ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿದರೆ ಮೈಸೂರು ನಾಲ್ಕನೇ ಸ್ಥಾನದಲ್ಲಿದೆ.
(ವಿಶ್ವವಿಖ್ಯಾತ ದಸರಾಕ್ಕೆ ವಿಧ್ಯುಕ್ತ ಚಾಲನೆ; ಮೊದಲ ದಿನದ ವಿಶೇಷತೆ ಹೀಗಿತ್ತು)