ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಇನ್ನೇನು ಹೊಸ ಜೀವನ ಆರಂಭಿಸಿ ಸುಖ ಸಂಸಾರದ ಕನಸು ಕಂಡಿದ್ದರು. ಆದ್ರೆ ಅವರ ಈ ಆಕಾಂಕ್ಷೆಗೆ ಕೊಳ್ಳಿ ಬಿದ್ದಿದೆ. ಯುವತಿಯ ಪೋಷಕರು ಯುವಕನ ಮೇಲೆ ಹಲ್ಲೆ ಮಾಡಿ ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಯುವ ಜೋಡಿಯನ್ನು ಆರಂಭದಲ್ಲೇ ಬೇರೆ ಬೇರೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್ ಮತ್ತು ಚೋಳೇನಹಳ್ಳಿ ಗ್ರಾಮದ ಅನನ್ಯ ಪರಸ್ಪರ ಪ್ರೀತಿಸುತ್ತಿದ್ದರು. ಮಾರ್ಚ್ 28ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಇಬ್ಬರು ಮದುವೆಯಾದರು. ಇದಾದ ಒಂದೇ ದಿನದಲ್ಲಿ ಇಬ್ಬರಿಗೂ ಆಘಾತ ಕಾದಿತ್ತು. ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದೊಯ್ದಿದ್ದಾರೆ ಎಂದು ನವವಿವಾಹಿತ ಅಭಿಷೇಕ್ ಆರೋಪಿದ್ದಾರೆ.