ಮೈಸೂರು: ಪ್ರವಾಸಿಗರ ನಗರಿ ಮೈಸೂರಿನ ಪ್ರಮುಖ ಆಕರ್ಷಣೀಯ ಸ್ಥಳ ಲಲಿತ್ ಮಹಲ್ ಪ್ಯಾಲೇಸ್ (Lalitha Mahal Palace). ಮೈಸೂರಿಗೆ ಬಂದ ಪ್ರವಾಸಿಗರು ಲಲಿತ್ ಮಹಲ್ ಹೋಟೆಲ್ ನೋಡಿ ಒಂದು ಫೋಟೋ ತೆಗೆಸಿಕೊಂಡು ಹೋಗುವುದು ಸಾಮಾನ್ಯ.
ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿ ಸ್ಥಳಗಳು ಹಾಗು ಪಾರಂಪರಿಕ ಕಟ್ಟಡಗಳನ್ನು ನೋಡಲು ದೇಶ- ವಿದೇಶಗಳಿಂದ ಪ್ರತಿ ವರ್ಷ ಅಂದಾಜು 30 ಲಕ್ಷ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಅದರಲ್ಲಿ ಪ್ರತಿಯೊಬ್ಬ ಪ್ರವಾಸಿಗರು ಮೈಸೂರಿನ ಸಾಂಪ್ರದಾಯಿಕ ಟಾಂಗಾ ಗಾಡಿ ಏರಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿರುವ ಲಲಿತ್ ಮಹಲ್ ಪ್ಯಾಲೇಸ್ ನೋಡದೆ ಹೋಗಲಾರರು.
ವಿಶೇಷ ಅತಿಥಿಗಳಿಗಾಗಿ ನಿರ್ಮಿಸಲಾದ ಅರಮನೆ:
ಪ್ರವಾಸೋದ್ಯಮಕ್ಕೂ ಲಲಿತ್ ಮಹಲ್ ಪ್ಯಾಲೇಸ್ಗೂ ಅವಿನಾಭಾವ ಸಂಬಂಧವಿದೆ. ಮೈಸೂರಿನ ಪ್ರವಾಸೋದ್ಯಮಕ್ಕೆ ಲಲಿತ್ ಮಹಲ್ ಕೊಡುಗೆ ಅಮೂಲ್ಯವಾದದ್ದು. ಮೈಸೂರಿನ ಒಡೆಯರ ಆಡಳಿತದ ಸಂದರ್ಭದಲ್ಲಿ ವೈಸ್ರಾಯ್ಗಳಿಗಾಗಿ ಹಾಗು ರಾಜಮನೆತನದ ವಿಶೇಷ ಅತಿಥಿಗಳಿಗಾಗಿ ನಿರ್ಮಿಸಲಾದ ಅರಮನೆ ಇದಾಗಿದೆ.
ಅದೇ ರೀತಿ ಈಗ ರಾಜಕೀಯ ಗಣ್ಯ ವ್ಯಕ್ತಿಗಳು ಆಗಮಿಸುವ ಸಂದರ್ಭದಲ್ಲಿ ಈ ಹೋಟೆಲ್ನ್ನು ಅವರ ವಾಸ್ತವ್ಯ ಮತ್ತು ಆತಿಥ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಇಂದಿನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಇಲ್ಲಿಯೇ ಉಳಿದುಕೊಂಡು ಆತಿಥ್ಯ ಸ್ವೀಕರಿಸಿದ್ದರು.