ಮೈಸೂರು:ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಹೊರ ರಾಜ್ಯದ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ನಡೆದಿದೆ. ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ಆಗಸ್ಟ್ 24ರ ಸಂಜೆ ಸುಮಾರು 6.30 ರಿಂದ 7.30 ರ ಸುಮಾರಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಬಡಾವಣೆಯಲ್ಲಿ ಸ್ನೇಹಿತನ ಜೊತೆ ಹೊರ ರಾಜ್ಯದ ವಿದ್ಯಾರ್ಥಿನಿ ತೆರಳಿದ್ದಳು. ಈ ವೇಳೆ ನಿರ್ಜನ ಪ್ರದೇಶದಲ್ಲಿ ಮದ್ಯಪಾನ ಮಾಡುತ್ತಿದ್ದ ಸುಮಾರು 5 ರಿಂದ 6 ಜನರ ಗುಂಪು ಬೈಕ್ನಲ್ಲಿ ಬರುತ್ತಿದ್ದ ಯುವಕ ಹಾಗೂ ಯುವತಿಯನ್ನು ತಡೆದಿದೆ. ಬಳಿಕ ಯುವಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದರಿಂದ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆ ನಂತರ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಘಟನೆಯಿಂದ ಯುವತಿ ಪ್ರಜ್ಞೆ ತಪ್ಪಿದ ಬಳಿಕ ಕಾಮುಕರ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಯುವಕ ಕೆಲ ಸಮಯದ ನಂತರ ಸಾವರಸಿಕೊಂಡು ಎದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವತಿಯನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಹೊರ ರಾಜ್ಯದ ಈ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಿಜಿಯಲ್ಲಿ ಉಳಿದುಕೊಂಡಿದ್ದಳು ಎನ್ನಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಘಟನೆಯ ಬಗ್ಗೆ ಯುವಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ:
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ದೆಹಲಿಯಿಂದಲೇ ಮೈಸೂರು ಉಸ್ತುವಾರಿ ಸಚಿವ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಸರ್ಕಾರಿ ಅತಿಥಿ ಗೃಹದಲ್ಲಿ ಸಭೆ ನಡೆದಿದ್ದು, ಈ ಗ್ಯಾಂಗ್ ರೇಪ್ ಪ್ರಕರಣದ ತನಿಖೆಗೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಭೆಯ ನಂತರ ಮಾಹಿತಿ ನೀಡಿದರು.
ಆರೋಪಿಗಳು ಯಾರು? :
ಮೈಸೂರು ನಗರದಲ್ಲಿ ಕಳೆದ ಮೂರು ದಿನಗಳಿಂದ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಶೂಟೌಟ್ ಆಗಿ ಅಮಾಯಕನೊಬ್ಬ ಸಾವನ್ನಪ್ಪಿದ್ದು, ಆ ಘಟನೆ ಮಾಸುವ ಮುನ್ನವೇ ಮಂಗಳವಾರ ಸಂಜೆ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಹೊರ ರಾಜ್ಯದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಪೊಲೀಸರಿಗೆ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಅತ್ಯಾಚಾರ ನಡೆದ ಸ್ಥಳದಲ್ಲಿ ತಜ್ಞರ ತಂಡ ಮಾದರಿಗಳನ್ನು ಸಂಗ್ರಹಿಸಿದೆ. ನಿರ್ಜನ ಪ್ರದೇಶವಾದ ಲಲಿತಾದ್ರಿಪುರಂನ ಈ ಸ್ಥಳದಲ್ಲಿ ಸಂಜೆಯಾಗುತ್ತಿದ್ದಂತೆ ಡ್ರಗ್ಸ್ ಹಾಗೂ ಮದ್ಯಪಾನ ಸೇವನೆಗೆ ಯುವಕರು ಹಾಗೂ ಚಟಕ್ಕೆ ದಾಸರಾದವರು ಇಲ್ಲಿಗೆ ಬರುತ್ತಾರೆ. ಆ ರೀತಿಯ ಬಂದ ತಂಡ ಈ ಕೃತ್ಯ ನಡೆಸಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಇಂದು ಗೃಹ ಸಚಿವರು ಮೈಸೂರಿಗೆ:
ಸರ್ಕಾರ ಈ ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮೈಸೂರಿಗೆ ಆಗಮಿಸಲಿದ್ದು, ಇಲ್ಲಿನ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಿದ್ದಾರೆ. ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಘಟನೆಯ ಬಗ್ಗೆ ಯುವತಿಯ ಜೊತೆಗೆ ಹೋಗಿದ್ದ ಯುವಕನ ಹೇಳಿಕೆ ಪಡೆಯಲಾಗಿದೆ. ಯುವತಿಯ ಹೇಳಿಕೆ ಪಡೆದ ನಂತರ ಹಾಗೂ ವೈದ್ಯಕೀಯ ವರದಿ ಬಂದ ನಂತರ ಈ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಈ ಪ್ರಕರಣದ ಪತ್ತೆಗಾಗಿ ಪೊಲೀಸರು ಸ್ಥಳೀಯ ಕ್ರಿಮಿನಲ್ಗಳು ಹಾಗೂ ಹೊರ ರಾಜ್ಯದ ವಿದ್ಯಾರ್ಥಿನಿಯ ಸ್ನೇಹಿತರು, ಹಲ್ಲೆಗೊಳಗಾದ ಯುವಕನ ಸ್ನೇಹಿತರನ್ನು ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ.