ಮೈಸೂರು:ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಇಂದು ಮಂಪರು ಪರೀಕ್ಷೆ ನಡೆಸುವ ಸಾಧ್ಯತೆಯಿದೆ.
ಈ ಹಿಂದೆ ನಡೆಸಿದ ದುಷ್ಕೃತ್ಯಗಳನ್ನು ಆರೋಪಿಗಳು ಒಂದೊಂದಾಗಿ ವಿಚಾರಣೆ ವೇಳೆ ಬಾಯ್ಬಿಡುತ್ತಿದ್ದಾರೆ. ಈ ಕುರಿತಂತೆ ಮತ್ತಷ್ಟು ಮಾಹಿತಿ ಕಲೆ ಹಾಕುವ ಕಾರಣಕ್ಕೆ ಮಂಪರು ಪರೀಕ್ಷೆಗೆ ಒಳಪಡಿಸುವ ಬಗ್ಗೆ ತನಿಖಾಧಿಕಾರಿಗಳು ಚಿಂತಿಸುತ್ತಿದ್ದಾರೆ.
ಸಿನಿಮೀಯ ರೀತಿಯಲ್ಲಿತ್ತು ಕಾರ್ಯಾಚರಣೆ
ಅಮಾನವೀಯ ಕೃತ್ಯ ಎಸಗಿದ ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆಗಸ್ಟ್ 28ರ ನಸುಕಿನ ಜಾವದಲ್ಲಿ ಪ್ರಕರಣದಲ್ಲಿ ಭಾಗಿಯಾದ ಒಬ್ಬನನ್ನು ಹೊರತುಪಡಿಸಿ ಐವರನ್ನು ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದರು.
ತಿರ್ಪೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಬಂಧಿಸಲು ಹಗಲು ಹೊತ್ತು ಕಾರ್ಯಾಚರಣೆ ನಡೆಸಿದರೆ ಪೋಷಕರು ಹಾಗು ಅಲ್ಲಿನ ಗ್ರಾಮಸ್ಥರಿಂದ ಅಡ್ಡಿಯಾಗಬಹುದು. ಆರೋಪಿಗಳು ಪರಾರಿಯಾಗುವ ಸಾಧ್ಯತೆಯೂ ಇತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳು ನಿದ್ರೆಯಲ್ಲಿದ್ದ ವೇಳೆಯಲ್ಲೇ ಬಂಧಿಸುವುದು ಉತ್ತಮ ಎಂದು ದಿನವಿಡೀ ಕಾದು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಕಾಮುಕರ ಭಯಾನಕ ಕೃತ್ಯಗಳು ಬಯಲು