ಮೈಸೂರು:'ಅತಿಥಿ ಸತ್ಕಾರ' ಎಂಬುದು ಭಾರತೀಯ ಸಂಸ್ಕೃತಿಯ ಪ್ರತೀಕ. ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸಿ ಗೌರವಪೂರ್ವಕವಾಗಿ ಅವರನ್ನು ಬೀಳ್ಕೊಡುವುದು ನಮ್ಮ ಸಂಪ್ರದಾಯ. ಇದನ್ನೇ ಇಲ್ಲೊಬ್ಬ ಮಹಿಳೆ ಉದ್ಯೋಗವನ್ನಾಗಿ ಮಾಡಿಕೊಂಡು ಯಶಸ್ವಿ ಮಹಿಳಾ ಉದ್ಯಮಿಯಾಗಿ ಬೆಳೆದಿದ್ದಾರೆ.
ಇವರ ಹೆಸರು ಶಶಿಕಲಾ ಅಶೋಕ್. ಮೈಸೂರು ನಿವಾಸಿ. ಮೈಸೂರಿಗೆ ಬರುವ ವಿದೇಶಿಯರನ್ನು ಸತ್ಕರಿಸಿ ಭಾರತೀಯ ಸಂಪ್ರದಾಯ, ಪರಂಪರೆ, ಆಚಾರ ವಿಚಾರಗಳ ಪರಿಚಯ, ಭಾರತೀಯ ಶೈಲಿಯ ಊಟವನ್ನು ಅವರಿಗೆ ಉಣ ಬಡಿಸುವ ಮೂಲಕ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ಅತಿಥಿ ಸತ್ಕಾರ ಉದ್ಯಮವಾಗಿ ಬೆಳೆದಿದ್ದು ಹೇಗೆ?:ಶಶಿಕಲಾ ಅವರು ಸಾಮಾನ್ಯ ಗೃಹಿಣಿಯಾಗಿದ್ದರು. ಅಡುಗೆ ಮನೆಯಿಂದ ಹೊರಬಂದು ಬೇರೆ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇತ್ತು. ಇವರ ಪತಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಒಮ್ಮೆ ಬ್ರಿಟನ್ ದೇಶದಿಂದ ಬಂದಿದ್ದ ದಂಪತಿ ಮೈಸೂರಿನ ಅರಮನೆ ಹಾಗೂ ಇಲ್ಲಿನ ಪಾರಂಪರಿಕ ಕಟ್ಟಡಗಳು ಹಾಗೂ ಸಂಸ್ಕೃತಿಯನ್ನು ಕಂಡು ಸಂತೋಷಗೊಂಡು ಶಶಿಕಲಾ ಅವರ ಪತಿಗೆ ನಾವು ಇಲ್ಲಿನ ಜನರ ವಾಸ, ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.
ಆಗ ಅವರು ತಮ್ಮ ಮನೆಗೇ ಆತಿಥ್ಯಕ್ಕೆ ಕರೆದಿದ್ದಾರೆ. ಬ್ರಿಟನ್ ಯಾತ್ರಿಗಳು ಶಶಿಕಲಾ ಅವರು ತಯಾರಿಸಿದ ಊಟ ಸವಿದು ಹಾಗೂ ಅವರ ಸತ್ಕಾರವನ್ನು ಕಂಡು ಸಂತೋಷಗೊಂಡಿದ್ದಾರೆ. ಬಳಿಕ ಇದನ್ನೇ ಉದ್ಯೋಗವನ್ನಾಗಿ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ಮೈಸೂರಿಗೆ ಬರುವ ವಿದೇಶಿಯರಿಗೆ ಇಲ್ಲಿನ ಊಟವನ್ನು ಸವಿಯುವ ಅವಕಾಶವನ್ನು ನೀವು ನೀಡಬಹುದು ಎಂದು ತಿಳಿಸಿದ್ದಾರೆ.