ಮೈಸೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಇದುವರೆಗೆ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಮೈಸೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಂತೇಶಪ್ಪ ತಿಳಿಸಿದರು.
ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದುವರೆಗೆ ವಾಡಿಕೆಯಂತೆ 748 ಮಿ.ಮೀ ಮಳೆಯಾಗಬೇಕಿದ್ದು, 746 ಮಿ ಮೀ ಮಳೆಯಾಗಿದೆ. ಕೇವಲ 0.3% ಮಳೆ ಕೊರತೆಯಾಗಿದೆ. ಆಗಸ್ಟ್‌ನಲ್ಲಿ ಭರ್ತಿಯಾಗುತ್ತಿದ್ದ ಕೆಆರ್ಎಸ್ ಜಲಾಶಯ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಅಕ್ಟೋಬರ್ ಅಂತ್ಯದಲ್ಲಿ ಭರ್ತಿಯಾಗಿದೆ ಎಂದರು.
ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ ಮಳೆ ಕೊರತೆಯಾಗಿತ್ತು. ಅಕ್ಟೋಬರ್ನಲ್ಲಿ ಸರಾಸರಿ 124 ಮಿ.ಮೀ ಮಳೆಯಾಗಬೇಕಿತ್ತು. ಆದರೆ 263 ಮಿ.ಮೀ ಮಳೆಯಾಗಿದೆ. ಅಕ್ಟೋಬರ್ನಲ್ಲಿ ಶೇ. 112ರಷ್ಟು ಹೆಚ್ಚು ಮಳೆಯಾಗಿದೆ. ಇಷ್ಟೊಂದು ಮಳೆ ಸುರಿದರೂ ಕೂಡ ಬೆಳೆ ಹಾನಿಯಾದ ಬಗ್ಗೆ ದೂರು ಬಂದಿಲ್ಲ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಜಮೀನಿನಲ್ಲಿ ಮಳೆ ನೀರು ನಿಲ್ಲದಂತೆ ರೈತರು ನೋಡಿಕೊಳ್ಳಬೇಕು ಎಂದು ತಿಳಿಸಿದರು.