ಮೈಸೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಮೈಸೂರು ವಿವಿಯ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಹೆಚ್.ನಾಗರಾಜು ಅವರನ್ನು ಮೈಸೂರು ವಿಶ್ವವಿದ್ಯಾನಿಲಯವು ಅಮಾನತುಗೊಳಿಸಿದೆ. ವಿವಿಯ ಕುಲಸಚಿವ ಪ್ರೊ.ಶಿವಪ್ಪ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಳೆದ ಏಪ್ರಿಲ್ 26ರಂದು ಬೆಂಗಳೂರಿನ ಮಲ್ಲೇಶ್ವರಂ ಠಾಣೆಯ ಪೊಲೀಸರು ನಾಗರಾಜು ಅವರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವರ ಹುದ್ದೆಯ ನೇಮಕಾತಿಯನ್ನು ಸರ್ಕಾರ ರದ್ದುಪಡಿಸಿತ್ತು. ಈ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ನಿರ್ದೇಶನದ ಮೇರೆಗೆ ಕುಲಸಚಿವರು, ಸಿಂಡಿಕೇಟ್ ಸಭೆಯ ತೀರ್ಮಾನ ಮತ್ತು ವಿಚಾರಣೆಯನ್ನು ಕಾಯ್ದಿರಿಸಿ ಪ್ರೊ.ನಾಗರಾಜು ಅವರನ್ನು ಏಪ್ರಿಲ್ 27ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.