ಮೈಸೂರು:ಆನ್‌ಲೈನ್ ಮೂಲಕ ಪರಿಚಯವಾಗಿದ್ದ ಒಡಿಶಾ ಮೂಲದ ಯುವತಿಯನ್ನು ಇಲ್ಲಿನ ಯುವಕನೊಬ್ಬ ಪ್ರೀತಿಸಿ ಮದುವೆಯಾಗಿದ್ದ. ಇದೀಗ ಯುವತಿಯ ಕುಟುಂಬಸ್ಥರು ಯುವತಿಯನ್ನು ಒಡಿಶಾಗೆ ಪೊಲೀಸರ ಮೂಲಕ ವಾಪಸ್ ಕರೆದೊಯ್ದಿದ್ದು, ಯುವಕ ತನ್ನ ಹೆಂಡತಿಗಾಗಿ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದಾನೆ.
ನಗರದ ಮಹಮ್ಮದ್ ಅಖಿಬ್ ಮತ್ತು ಒಡಿಶಾದ ಪ್ರಿಯಾತ್ ರಾವತ್ ಪ್ರೀತಿಸಿ ಮದುವೆಯಾದವರು. ಯುವತಿ ಕುಟುಂಬಸ್ಥರು ದಿಢೀರನೆ ಆಕೆಯನ್ನು ಕರೆದುಕೊಂಡು ಒಡಿಶಾಗೆ ತೆರಳಿದ್ದಾರೆ. ಪೊಲೀಸರು ಮತ್ತೆ ಯುವತಿಯನ್ನು ಮತ್ತೆ ವಾಪಸ್ ಕರೆದುಕೊಂಡು ಬರುವುದಾಗಿ ತಿಳಿಸಿದ್ದಾರೆ. ಆದರೆ, ಪೊಲೀಸರು ಈಗ ಯುವತಿಯ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಯುವಕ ಮಹಮ್ಮದ್ ಅಖಿಬ್ ಆರೋಪಿಸಿದ್ದಾರೆ.
ಒಡಿಶಾ ಟು ಮೈಸೂರು ಪ್ರೀತಿ:ಮೈಸೂರಿನ ಯುವಕ ಅಖಿಬ್ಗೆ ಒಡಿಶಾದ ಯುವತಿ ಪ್ರಿಯಾತ್ ರಾವತ್ಒಂದು ವರ್ಷದ ಹಿಂದೆಆನ್ಲೈನ್ ಗೇಮ್ ವೇಳೆ ಪರಿಚಯವಾಗಿ, ಪರಸ್ಪರ ಪ್ರೀತಿಸಿದ್ದರು. ಯುವಕ ಅನ್ಯ ಕೋಮಿನವನಾದ ಕಾರಣ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧಿಸಿದ್ದರು. ಬಳಿಕ ಅಖಿಬ್ ಒಡಿಶಾಗೆ ಹೋಗಿ ಯುವತಿಯನ್ನು ಯಾರಿಗೂ ತಿಳಿಸದೇ ಕರೆದುಕೊಂಡು ಬಂದಿದ್ದಾನೆ.
ಮೈಸೂರಿನ ಅಖಿಬ್ ಮತ್ತು ಒಡಿಶಾದ ಪ್ರಿಯಾತ್ ರಾವತ್ ಕುಟುಂಬಸ್ಥರ ಸಮ್ಮುಖದಲ್ಲಿ ಫೆಬ್ರವರಿ 13 ರಂದು ಇಬ್ಬರೂ ಮದುವೆಯಾಗಿದ್ದಾರೆ. ಇತ್ತ ಒಡಿಶಾದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿವಾಹದ ಬಳಿಕ ಯುವತಿ ತನ್ನ ಮನೆಗೆ ಕರೆ ಮಾಡಿ ತಾನು ಮೈಸೂರಿನ ಯುವಕನೊಂದಿಗೆ ಮದುವೆಯಾಗಿದ್ದಾಗಿ ತಿಳಿಸಿದ್ದಾಳೆ. ಇದರಿಂದ ಪೋಷಕರು ಕೆರಳಿದ್ದಾರೆ.
ಯುವತಿಯನ್ನು ಒಡಿಶಾಗೆ ಕರೆದೊಯ್ದ ಪೊಲೀಸರು:ಇದೀಗ ಪೋಷಕರು ಒಡಿಶಾ ಪೊಲೀಸರ ಮುಖಾಂತರ ಇಲ್ಲಿನ ಉದಯಗಿರಿ ಠಾಣೆ ಪೊಲೀಸರ ಸಹಾಯ ಪಡೆದು ಯುವತಿಯನ್ನು ಕರೆದೊಯ್ದಿದ್ದಾರೆ. ಅಲ್ಲದೇ, ಮತ್ತೆ ಆ ಯುವತಿಯನ್ನು ವಾಪಸ್ ಕರೆ ತರಲಾಗುವುದು ಎಂದು ಹೇಳಿದ್ದಾರೆ. ಆದರೆ, ಈವರೆಗೂ ಯುವತಿಯ ಸಂಪರ್ಕ ಸಿಕ್ಕಿಲ್ಲ ಎಂದು ಯುವಕ ಅಖಿಬ್ ದೂರಿದ್ದಾನೆ.
ಹೀಗಾಗಿ ತನ್ನ ಹೆಂಡತಿಯನ್ನು ವಾಪಸ್ ಕರೆಸಬೇಕು ಎಂದು ಒತ್ತಾಯಿಸಿರುವ ಯುವಕ, ಒತ್ತಾಯಪೂರ್ವಕವಾಗಿ ತನ್ನ ಪತ್ನಿಯನ್ನು ಕರೆದೊಯ್ದ ಉದಯಗಿರಿ ಮತ್ತು ಒಡಿಶಾ ಪೊಲೀಸರ ವಿರುದ್ಧ ಕೋರ್ಟ್ಗೆ ದೂರು ನೀಡಲು ನಿರ್ಧರಿಸಿದ್ದಾನೆ.
ಇದನ್ನೂ ಓದಿ:ಪ್ರೀತಿಸಿ ವಿವಾಹವಾದ ತಮಿಳುನಾಡು ಸಚಿವರ ಪುತ್ರಿ: ರಕ್ಷಣೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ