ಮೈಸೂರು : ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕುರಿತಂತೆ ಪ್ರಗತಿಪರರು ಎಂದು ಹೇಳಿಕೊಂಡಿರುವ ಕೆಲವು ವ್ಯಕ್ತಿಗಳು ಡಿ.17ರಂದು ರಂಗಾಯಣಕ್ಕೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಹೇಳಿರುವುದರಿಂದ ರಂಗಾಯಣಕ್ಕೆ ಸೂಕ್ತ ರಕ್ಷಣೆ ಕೊಡಬೇಕೆಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಡಿಸೆಂಬರ್ 12ರಂದು ದೂರು ದಾಖಲಿಸಿರುವ ರಂಗಾಯಣ ನಿರ್ದೇಶಕರು, ದೂರಿನಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ರಂಗಾಯಣದ ಯಾವ ಚಟುವಟಿಕೆಯನ್ನು ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಲಾಗಿದೆ. ಇದರಿಂದ ರಂಗ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.
ಕಲಾವಿದರಲ್ಲೂ ಗೊಂದಲ ಮೂಡುತ್ತದೆ. ಕಾನೂನು ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಡ್ಡಂಡ ಸಿ ಕಾರ್ಯಪ್ಪ ದೂರಿನಲ್ಲಿ ಮನವಿ ಮಾಡಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ. ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಂಗಾಸಕ್ತರಾದ ನಾವೇ ರಕ್ಷಣೆ ನೀಡುತ್ತೇವೆ :ಕಾರ್ಯಪ್ಪ ಅವರು ಯಾರಿಂದ ಬೆದರಿಕೆ ಎಂಬುದನ್ನು ತಿಳಿಸಿದರೇ ರಂಗಾಸಕ್ತರಾದ ನಾವೇ ರಕ್ಷಣೆ ಕೊಡುತ್ತೇವೆ ಎಂದು ಕಾರ್ಯಪ್ಪ ಅವರ ಕ್ರಮವನ್ನು ಖಂಡಿಸಿ ನೆಲೆ ಹಿನ್ನೆಲೆ ಸಂಸ್ಥೆಯ ಕೆ.ಆರ್.ಗೋಪಾಲಕೃಷ್ಣ ಮತ್ತು ಕೆ.ಪಿ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಕುರಿತು ರಂಗಾಸಕ್ತರು ಎತ್ತಿರುವ ತಾತ್ವಿಕ ಪ್ರಶ್ನೆಗಳಿಗೆ ಕಾರ್ಯಪ್ಪ ಗಂಭೀರವಾಗಿ ಉತ್ತರಿಸದೆ ಉಡಾಫೆ, ಭಾವಾವೇಶದಿಂದ ಉತ್ತರ ನೀಡಿದ್ದಾರೆ. ಅವರ ಅಪ್ರಬುದ್ಧ ಪ್ರತಿಕ್ರಿಯೆಗಳಿಂದ ಸಂವಾದಗಳ ಬಾಗಿಲು ಮುಚ್ಚಿ ತನ್ನ ನೂಲಬಲೆಯಲ್ಲಿ ತಾನೇ ಬಂಧಿಯಾಗಿರುವ ರೇಷ್ಮೆ ಹುಳದಂತಾಗಿದ್ದಾರೆ. ಅವರು ತಮ್ಮ ಸ್ಥಾನ ಮತ್ತು ಇತರ ರಂಗಕರ್ಮಿಗಳ ಘನತೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು ಎಂದು ರಂಗಾಸಕ್ತರು ಒತ್ತಾಯಿಸಿದ್ದಾರೆ.