ಮೈಸೂರು :2020ರ ನವೆಂಬರ್‌ನಿಂದ 2021ರ ನವೆಂಬರ್‌ವರೆಗೆ ಕಳ್ಳತನ ಪ್ರಕರಣದಲ್ಲಿ ದೊರೆತ ಒಟ್ಟು 5.6 ಕೋಟಿ ರೂ. ಮೌಲ್ಯದ ವಸ್ತುಗಳನ್ನು ನಗರ ಪೊಲೀಸರು ಪ್ರಾಪರ್ಟಿ ಪರೇಡ್ ನಡೆಸುವ ಮೂಲಕ ಮರಳಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಮಾಹಿತಿ ನೀಡಿದರು.
ಮೈಸೂರು ನಗರ ಪೊಲೀಸ್ ಪ್ರಾಪರ್ಟಿ ಪರೇಡ್ :ಕಳೆದ ಒಂದು ವರ್ಷದಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 374 ವಿವಿಧ ಸ್ವತ್ತು ಕಳವು ಪ್ರಕರಣಗಳು ಪತ್ತೆಯಾಗಿವೆ. 301 ಆರೋಪಿಗಳನ್ನು ಬಂಧಿಸಲಾಗಿದೆ. ₹5.06 ಕೋಟಿ ಮೌಲ್ಯದ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಅಂದರೆ 2020ರ ನವೆಂಬರ್‌ನಿಂದ 2021ರ ನವೆಂಬರ್‌ವರೆಗೆ ಸ್ವತ್ತು ಕಳವು ಪ್ರಕರಣಗಳಲ್ಲಿ 374 ಕಳವು ಪ್ರಕರಣ ಪತ್ತೆ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಒಟ್ಟು ದಾಖಲಾದ ಪ್ರಕರಣಗಳ ವಿವರ :ಒಟ್ಟು 676 ಪ್ರಕರಣ ದಾಖಲಾಗಿವೆ. ಅದರಲ್ಲಿ 374 ಪ್ರಕರಣ ಪತ್ತೆಯಾಗಿವೆ. 7.34 ಕೋಟಿ ಮೌಲ್ಯದ ವಸ್ತುಗಳು ಕಳುವಾಗಿವೆ. ಅದರಲ್ಲಿ 5.06 ಕೋಟಿ ಮೌಲ್ಯದ ವಸ್ತುಗಳನ್ನು ಮರಳಿ ವಶಪಡಿಸಿಕೊಳ್ಳಲಾಗಿದೆ. 301 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳ ವಿವರ :ಇದರಲ್ಲಿ 6 ಕೆಜಿ 439 ಗ್ರಾಂ ಚಿನ್ನ, 8ಕೆಜಿ 245 ಗ್ರಾಂ ಬೆಳ್ಳಿ, 196 ದ್ವಿಚಕ್ರ ವಾಹನ, 6 ಕಾರು, 10 ಇತರೆ ವಾಹನಗಳು, 49 ಮೊಬೈಲ್ ಫೋನ್‌ಗಳು, 2 ಲ್ಯಾಪ್‌ಟಾಪ್, 309 ಕೆಜಿ ಗಂಧದ ಮರದ ತುಂಡುಗಳು ಮತ್ತು 18,77,980 ರೂ.ನಗದು ಸೇರಿ 6 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಗೃಹೋಪಯೋಗಿ, ಕೈಗಾರಿಕೋಪಯೋಗಿ ಹಾಗೂ ಇತರೆ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆಯಾದ ಪ್ರಕರಣಗಳ ಮಾಹಿತಿ :ದರೋಡೆ 4, ಸುಲಿಗೆ 17, ಸರಗಳ್ಳತನ 34, ಕನ್ನ ಕಳುವು (ಹಗಲು- ರಾತ್ರಿ) 47, ಮನೆ ಕಳವು 9, ಕೆಲಸದವರಿಂದ ಕಳ್ಳತನ 5, ವಾಹನ ಕಳವು 212, ಸಾಮಾನ್ಯ ಕಳವು 35, ಜಾನುವಾರು ಕಳವು 6, ಕೆ ಎಫ್ ಆ್ಯಕ್ಟ್ 5 ಸೇರಿದಂತೆ ಒಟ್ಟು 374 ಪ್ರಕರಣ ಪತ್ತೆ ಮಾಡಲಾಗಿದೆ.