ಮೈಸೂರು:ಈ ಬಾರಿದೇಶದಲ್ಲಿ ನಡೆಯುತ್ತಿರುವ ಪಂಚ ರಾಜ್ಯ ಚುನಾವಣೆಗೆ ಮೈಸೂರಿನ ಮೈಲ್ಯಾಕ್ ಕಂಪನಿಯಿಂದ 5 ಲಕ್ಷ ಇಂಕ್ ಬಾಟಲ್ಗಳನ್ನು ಆಯಾ ರಾಜ್ಯಗಳ ಚುನಾವಣಾ ಆಯೋಗದ ಕೋರಿಕೆ ಮೇಲೆ ಕಳುಹಿಸಲಾಗಿದೆ ಎಂದು ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟಡ್ (ಮೈಲ್ಯಾಕ್) ಅಧ್ಯಕ್ಷ ಎನ್.ವಿ.ಫಣೀಷ್ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಚುನಾವಣೆಗೆ ಅಗತ್ಯವಿರುವ ಅಳಿಸಲಾಗದ ಶಾಯಿ ಅನ್ನು ಮೈಸೂರಿನ ಮೈಲ್ಯಾಕ್ನಿಂದ ಸರಬರಾಜು ಮಾಡಲಾಗುತ್ತದೆ. ಆದ್ದರಿಂದಾಗಿ ಇದು ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಈ ವರ್ಷ ದೇಶದಲ್ಲಿ ನಡೆಯುತ್ತಿರುವ 5 ರಾಜ್ಯಗಳಿಗೂ ಪೂರೈಸಲಾಗಿದೆ.
ಪಂಚ ರಾಜ್ಯ ಚುನಾವಣೆಗೆ ಮೈಲ್ಯಾಕ್ನಿಂದ 5 ಲಕ್ಷ ಇಂಕ್ ಬಾಟಲ್ ಸರಬರಾಜು ಯಾವ ಯಾವ ರಾಜ್ಯಕ್ಕೆ ಎಷ್ಟೆಷ್ಟು ಇಂಕ್ ಬಾಟಲ್ ಸರಬರಾಜು?
ಕಳೆದ ನವೆಂಬರ್ನಿಂದಲೇ ಆಯಾ ರಾಜ್ಯಗಳ ಚುನಾವಣೆ ಆಯೋಗದಿಂದ ಇಂಕ್ ಬಾಟಲ್ಗಳಿಗೆ ಬೇಡಿಕೆ ಇಟ್ಟಿದ್ದರು. ಅದರ ಅನ್ವಯ ಉತ್ತರ ಪ್ರದೇಶದಿಂದ 10 ಸಿಸಿ ಯ 4 ಲಕ್ಷ ಬಾಟಲ್, ಪಂಜಾಬ್ ಗೆ 62 ಸಾವಿರ ಬಾಟಲ್, ಗೋವಾಗೆ 5 ಸಾವಿರ ಬಾಟಲ್, ಮಣಿಪುರಕ್ಕೆ 7,400 ಬಾಟಲ್, ಮತ್ತು ಉತ್ತರಖಾಂಡದಿಂದ 30 ಸಾವಿರ ಬಾಟಲ್ಗಳಿಗೆ ಬೇಡಿಕೆ ಇಟ್ಟಿದ್ದರು.
ಪಂಜಾಬ್, ಗೋವಾ, ಮಣಿಪುರ, ಹಾಗೂ ಉತ್ತರಖಾಂಡಗಳಿಗೆ ಅವರು ಕೇಳಿದಷ್ಟು ಇಂಕ್ ಅನ್ನು ಸರಬರಾಜು ಮಾಡಲಾಗಿದೆ. ಉತ್ತರ ಪ್ರದೇಶ ದೊಡ್ಡ ರಾಜ್ಯವಾಗಿರುವುದರಿಂದ 4 ಲಕ್ಷ ಬಾಟಲ್ ಪೈಕಿ 2 ಲಕ್ಷ ಬಾಟಲ್ಗಳನ್ನು ಪೂರೈಕೆ ಮಾಡಿದ್ದೇವೆ. ಉಳಿದ 2 ಲಕ್ಷ ಬಾಟಲ್ಗಳನ್ನು ಎರಡು- ಮೂರು ದಿನಗಳಲ್ಲಿ ಪೂರೈಕೆ ಮಾಡುತ್ತೇವೆ ಎಂದರು. ಈ ಪಂಚ ರಾಜ್ಯಗಳ ಚುನಾವಣೆಯಿಂದ ನಮ್ಮ ಸಂಸ್ಥೆಯು 8 ಕೋಟಿ 96 ಲಕ್ಷದ 72 ಸಾವಿರ ರೂ. ವಹಿವಾಟು ಮಾಡಿದೆ ಎಂದು ಫಣೀಷ್ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚುನಾವಣೆಯಲ್ಲಿ ಮಾಯಾವತಿ ಸ್ಪರ್ಧಿಸುವುದಿಲ್ಲ: ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ಚಂದ್ರ ಮಿಶ್ರಾ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಸಂಸ್ಥೆಯನ್ನು ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಮುಂದಾಲೋಚನೆಯಿಂದ ಸ್ಥಾಪಿಸಿದ್ದಾರೆ. ಈ ದೇಶದ ಚುನಾವಣಾ ಆಯೋಗವು ನಮ್ಮ ಸಂಸ್ಥೆಯ ಮೇಲೆ ಸಂಪೂರ್ಣ ಭರವಸೆಯನ್ನು ಇಟ್ಟು ವ್ಯವಹಾರ ಮಾಡುತ್ತಿದೆ. ಪ್ರಧಾನಿಯವರು ನಮ್ಮ ಸಂಸ್ಥೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ ಅದು ಖುಷಿಯಿದೆ. ನಾನು ಈ ಸಂಸ್ಥೆಯ ಅಧ್ಯಕ್ಷನಾಗಿರುವುದು ಹೆಮ್ಮೆಯ ವಿಚಾರ ಎಂದರು.
ಇಂಕ್ ಬಾಟಲ್ ಬದಲಾಗಿ ಮಾರ್ಕರ್ ಪೆನ್
ಚುನಾವಣಾ ಆಯೋಗದವರು ಇಂಕ್ ಬಾಟಲ್ ಬದಲಿಗೆ ಮಾರ್ಕರ್ ಪೆನ್ಗಳ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ನಾವು ಸುದೀರ್ಘ ಪ್ರಯೋಗ ನಡೆಸಿ ಮಾರ್ಕರ್ ಪೆನ್ ಅನ್ನು ತಯಾರಿಸಿದ್ದೇವೆ. ಅದನ್ನು ಸದ್ಯದಲ್ಲೇ ಚುನಾವಣಾ ಆಯೋಗದ ಸಮ್ಮುಖದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಅವರ ಆದೇಶದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಇದರ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಯಶಸ್ವಿಗೊಳ್ಳುತ್ತದೆ ಎಂಬ ವಿಶ್ವಾಸವನ್ನ ಫಣೀಷ್ ವ್ಯಕ್ತಪಡಿಸಿದರು.