ಮೈಸೂರು:ನಾಡ ಹಬ್ಬ ದಸರೆಯಲ್ಲಿ ಜಂಬೂ ಸವಾರಿ ಮೆರವಣಿಗೆ ಪ್ರಮುಖ ಆಕರ್ಷಯಾಗಿದೆ. ಅದೇ ರೀತಿ, ಅದಕ್ಕಿಂತ ಮೊದಲು ಪೂಜೆ ಸಲ್ಲಿಸಲ್ಪಡುವ ಶಿವನ ಲಾಂಛನ ಎನ್ನಲಾದ ನಂದಿ ಧ್ವಜ ಕೂಡ ವಿಜಯ ದಶಮಿಯ ದಿನ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ನಂದಿ ಧ್ವಜಕ್ಕೆ ಜಂಬೂ ಸವಾರಿಯ ಮುನ್ನವೇ ಪೂಜೆ ಮಾಡುವುದು ಸಂಪ್ರದಾಯ.
ನಂದಿ ಧ್ವಜಕ್ಕೆ ಮೊದಲ ಪೂಜೆ.. ಅರಮನೆಯ ಮುಂಭಾಗದ ಬಲ ರಾಮ ಗೇಟ್ನ ಸಮೀಪ ಇರುವ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಜಂಬೂ ಸವಾರಿಯ ದಿನ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ದಸರಾ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
33 ಅಡಿ ಎತ್ತರವಿರುವ 125 ಕೆ.ಜಿ ತೂಕವಿರುವ ನಂದಿ ಕಂಬದಲ್ಲಿ 10 ವರ್ಣಗಳ ಧ್ವಜವಿದೆ. ಇದರ ಮೇಲೆ ಪಂಚ ಕಳಶವಿದೆ. ಉಡಿಗಾಲ ಮಹದೇವಪ್ಪ ನೇತೃತ್ವದಲ್ಲಿ ಈ ನಂದಿ ಧ್ವಜ ಕುಣಿತ ನಡೆಯುತ್ತದೆ. ವಿಜಯ ದಶಮಿಯಂದು ಶಿವನ ಲಾಂಛನ ಎಂದು ಕರೆಯಲ್ಪಡುವ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ ಬಳಿಕ ಜಂಬೂ ಸವಾರಿಗೆ ಚಾಲನೆ ನೀಡುತ್ತಾರೆ.
ರಾಜರ ಕಾಲದಲ್ಲಿ ನಂದಿ ಧ್ವಜ ಪೂಜೆ:
ರಾಜರ ಕಾಲದಲ್ಲಿಯೂ ನಂದಿ ಧ್ವಜ ತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆ ಕರೆದೊಯ್ದು, ಅಂಬಾ ವಿಲಾಸ ಅರಮನೆಯಲ್ಲಿ ಸತ್ಕರಿಸಿ ಬಳಿಕ ತಂಡವನ್ನು ಅರಮನೆಯ ಬಲರಾಮ ದ್ವಾರದ ಬಳಿಗೆ ಕರೆದೊಯ್ಯುತ್ತಾರೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಈಗಲೂ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ನಂದಿ ಧ್ವಜದ ವೈಶಿಷ್ಟ್ಯ:
ನಂದಿ ಧ್ವಜವನ್ನು ಗಟ್ಟಿಮುಟ್ಟಾದ ಉದ್ದನೆಯ ಬಿದಿರಿನ ಬೊಂಬಿಗೆ ಬೆಳ್ಳಿ ಕಟ್ಟನ್ನು (ಬಳೆ) ಒಂದರ ಮೇಲೊಂದರಂತೆ ಜೋಡಿಸಿರುತ್ತಾರೆ. ಅಂತೆಯೇ ನಂದಿ ಧ್ವಜ ಹೊತ್ತು ಕುಣಿಯುವಾಗ ಶಬ್ದ ಬರುವಂತೆ ಮಾಡಲು ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕ ಕಲ್ಲು ಅಥವಾ ಹುಣಸೆ ಬೀಜ ತುಂಬಲಾಗುತ್ತದೆ. ಕಂಬದಲ್ಲಿನ ಪೀಠದಲ್ಲಿ ನಂದಿ ವಿಗ್ರಹವಿದ್ದು, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿದೆ.
ಹರಡೆ ಮೇಲೆ - ಕೆಳಗೆ ಕೊಳ್ ಎಂದು ಕರೆಯಲ್ಪಡುವ ತಟ್ಟೆಯಾಕಾರದ ಲೋಹದ ಉಂಗುರಗಳು ಇರುತ್ತದೆ. ನಂದಿ ಕಂಬಕ್ಕೂ ಬಿರಡೆ ಕಂಬ, ವ್ಯಾಸಗೋಲು, ನಂದಿಕಂಬ, ನಂದಿಪಟ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ನಂದಿ ಧ್ವಜ ಕುಣಿತಕ್ಕೆ ಕರಡೆ, ಡೊಳ್ಳು, ಸೊನಾಮಿ, ತಾಳ, ಚಮ್ಮಾಳ ಎಂಬ ವಾದ್ಯಗಳ ಹಿನ್ನೆಲೆ ಇರುತ್ತದೆ. ನಂದಿ ಧ್ವಜ ಹೊತ್ತು ಕುಣಿಯುವವರು ಭಾರದ ಕಂಬವನ್ನು ಎದೆ, ನೆತ್ತಿ, ಗಲ್ಲದ ಮೇಲೆ ನಿಲ್ಲಿಸಿಕೊಂಡು ಕುಣಿಯುತ್ತಾ ಚಮತ್ಕಾರ ಪ್ರದರ್ಶಿಸುತ್ತಾರೆ.
ಇದನ್ನೂ ಓದಿ:ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ: ಗಜಪಡೆಗೆ ಅಂತಿಮ ಹಂತದ ಅಲಂಕಾರ ಪೂರ್ಣ