ಮೈಸೂರು: ಸ್ವಚ್ಛ ನಗರಿ ಪಟ್ಟ ಹೊಂದಿರುವ ಮೈಸೂರು ನಗರದ ಪ್ರಮುಖ ಜನನಿಬಿಡ ರಸ್ತೆಯಲ್ಲಿ ನಿರ್ಮಾಣವಾಗಿರುವ ಇ-ಟಾಯ್ಲೆಟ್ಗಳು ಸರಿಯಾದ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿವೆ.
ನಗರದಲ್ಲಿ ಹೈಟೆಕ್ ರೀತಿಯಲ್ಲಿ 1.16 ಕೋಟಿ ರೂ. ವೆಚ್ಚದಲ್ಲಿ 23 ಇ-ಟಾಯ್ಲೆಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಾರಂಭದಲ್ಲಿ ಒಂದು ವರ್ಷ ಕಾಲ ಗುತ್ತಿಗೆದಾರರು ಇವನ್ನು ನಿರ್ವಹಣೆ ಮಾಡಿದ್ದರು. ಗುತ್ತಿಗೆ ಮುಗಿದ ನಂತರ ನಿರ್ವಹಣೆ ಕೆಲಸವನ್ನು ಬಿಟ್ಟಿದ್ದಾರೆ. ಆದರೆ ಪಾಲಿಕೆಯವರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಇ-ಶೌಚಾಲಯವನ್ನು ನಿರ್ವಹಣೆ ಮಾಡುವವರು ಇಲ್ಲದೇ, ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಬಾಗಿಲನ್ನು ಬಂದ್ ಮಾಡಲಾಗಿದೆ.
ನಗರದಲ್ಲಿರುವ ಎಲ್ಲ 23 ಇ-ಟಾಯ್ಲೆಟ್ಗಳು ಬಂದ್ ಆಗಿವೆ. ಈ ಸಂಬಂಧ ಮೈಸೂರು ನಿವಾಸಿ ಟಿ. ಕೃಷ್ಣರೆಡ್ಡಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದು, ಇದರಿಂದ ಈ ವಿಷಯ ಬೆಳಕಿಗೆ ಬಂದಿದೆ.