ಕರ್ನಾಟಕ

karnataka

ETV Bharat / city

ಮೈಸೂರು ದಸರಾ.. ಗಜಪಡೆ ತಾಲೀಮು, ಆಹಾರ ಕ್ರಮ ಹೇಗಿದೆ ಗೊತ್ತಾ? - ಮೈಸೂರು ದಸರಾ ಆನೆಗಳ ಆಹಾರ ಕ್ರಮ

ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ದಸರಾ ಗಜಪಡೆ ತಾಲೀಮು ಪ್ರಾರಂಭಗೊಂಡಿದೆ. ನಿತ್ಯ ಆನೆಗಳಿಗೆ ತಾಲೀಮಿನ ಜೊತೆ ವಿಶೇಷ ಆಹಾರ ನೀಡಲಾಗುತ್ತಿದೆ.

Mysore  Dasara
ಮೈಸೂರು ದಸರಾ

By

Published : Aug 17, 2022, 2:27 PM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಗಜಪಡೆ ತಯಾರಿ ನಡೆಯುತ್ತಿದ್ದು, ಆನೆಗಳಿಗೆ ನಿತ್ಯ ತಾಲೀಮು ಹಾಗೂ ವಿಶೇಷ ಆಹಾರ ನೀಡಲಾಗುತ್ತಿದೆ.

ಈಗಾಗಲೇ ದಸರಾ ಗಜಪಡೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದೆ. ಈ ಬಾರಿಯ ನಾಡಹಬ್ಬದ ತಯಾರಿ ಗಜಪಡೆ ರಾಜ ನಡಿಗೆಯೊಂದಿಗೆ ಆರಂಭವಾಗಿದ್ದು, ದಸರಾಗೆ ಸಿದ್ಧತೆಗಳು ಪ್ರಾರಂಭಗೊಂಡಿವೆ. ಆಗಸ್ಟ್ 7 ರಂದು ಅಭಿಮನ್ಯು ನೇತೃತ್ವದ ಅರ್ಜುನ, ಭೀಮ, ಧನಂಜಯ, ಮಹೇಂದ್ರ, ಗೋಪಾಲಸ್ವಾಮಿ, ಚೈತ್ರ, ಲಕ್ಷ್ಮಿ ಹಾಗೂ ಕಾವೇರಿ ಸೇರಿದಂತೆ 9 ಆನೆಗಳು ಗಜ ಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದು, ಆಗಸ್ಟ್ 10 ರಂದು ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಆನೆಗಳನ್ನ ಬರ ಮಾಡಿಕೊಳ್ಳಲಾಗಿದೆ. ಆಗಸ್ಟ್ 14 ರಿಂದ ಆನೆಗಳಿಗೆ ತಾಲೀಮು ಆರಂಭವಾಗಿದೆ. ನಿತ್ಯ ಅರಮನೆಯಿಂದ ಬನ್ನಿ ಮಂಟಪದ ವರೆಗೆ ಬೆಳಗ್ಗೆ ಮತ್ತು ಸಂಜೆ 5 ಕಿ ಮೀ ತಾಲೀಮು ಪ್ರಾರಂಭಿಸಲಾಗಿದೆ.

ಮೈಸೂರು ದಸರಾ ಗಜಪಡೆ ತಾಲೀಮು

ಗಜಪಡೆ ತಾಲೀಮಿನ ಉದ್ದೇಶ ಹಾಗೂ ಆನೆಗಳಿಗೆ ನೀಡುವ ವಿಶೇಷ ಆಹಾರ, ಮಜ್ಜನ ಸೇರಿದಂತೆ ಹಲವಾರು ವಿಚಾರಗಳ ಕುರಿತು ಡಿಸಿಎಫ್ ಕಾರಿಕಾಳನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 'ದಸರಾ ಆನೆಗಳಿಗೆ ಆಗಸ್ಟ್ 14 ರಿಂದ ತಾಲೀಮು ಪ್ರಾರಂಭವಾಗಿದ್ದು, ಅರಮನೆಯಿಂದ ಬನ್ನಿ ಮಂಟಪದ ವರೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ. ಈ ಬಾರಿಯ ದಸರಾ ಜಂಬೂ ಸವಾರಿ ಸಂಜೆಯ ವೇಳೆಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದ್ದು, ಆನೆಗಳಿಗೆ ಸಂಜೆಯ ವೇಳೆ ಹೆಚ್ಚಿನ ತಾಲೀಮು ನಡೆಸಲಾಗುತ್ತಿದೆ' ಎಂದಿದ್ದಾರೆ.

ಸಂಜೆ ತಾಲೀಮು ಮುಖ್ಯವಾಗಿ ಜನಜಂಗುಳಿ, ವಾಹನ ದಟ್ಟಣೆ ಮತ್ತು ದೀಪಾಲಂಕರದಿಂದ ಕೂಡಿದ್ದು, ಇವುಗಳಿಗೆಲ್ಲ ಆನೆಗಳು ಹೊಂದಿಕೊಂಡು ಹೋಗುವಂತೆ ಅವುಗಳನ್ನು ತಯಾರು ಮಾಡಲಾಗುತ್ತಿದೆ.

ಇದನ್ನೂ ಓದಿ:ಮೈಸೂರು ಅರಮನೆ ಹೊರ ಆವರಣದಲ್ಲಿ ಗಜಪಡೆ ತಾಲೀಮು ಆರಂಭ

ಮೈಸೂರು ದಸರಾ ಆನೆಗಳ ಆಹಾರ ಕ್ರಮ:ಆನೆಗಳಿಗೆ ಪೋಷಕಾಂಶಯುಕ್ತ ಆಹಾರ ನೀಡುವುದು ಬಹಳ ಮುಖ್ಯವಾಗಿದ್ದು, ಅವುಗಳಿಗಾಗಿ 3 ರೀತಿಯ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಹಸಿಹುಲ್ಲು, ಸೊಪ್ಪು ಮೊದಲ ರೀತಿಯ ಆಹಾರವಾಗಿದ್ದು, ಒಣಗಿದ ಆಹಾರ, ಭತ್ತ, ಭತ್ತದ ಹುಲ್ಲು ಕುಸರೆ ರೂಪದಲ್ಲಿ ಎರಡನೇ ರೀತಿಯ ಆಹಾರವಾಗಿ ನೀಡಲಾಗುತ್ತಿದೆ. ಕೊನೆಯದಾಗಿ ಬೇಯಿಸಿದ ಹೆಸರುಕಾಳು, ಉದ್ದಿನಕಾಳು, ಗೋಧಿ, ತರಕಾರಿ, ಬೆಣ್ಣೆ ಸೇರಿಸಿ ಆಹಾರ ನೀಡಲಾಗುತ್ತಿದೆ. ಇದರಿಂದ ಆನೆಗಳು ಮೈಕಟ್ಟುತ್ತಿದ್ದು ಜಂಬೂ ಸವಾರಿಗೆ ಸಹಾಯಕಾರಿಯಗಲಿದೆ ಎಂದು ವಿವರಿಸಿದರು.

ಗಜಪಡೆ ಸ್ನಾನ: ಆನೆಗಳಿಗೆ ಬೆಳಗಿನ ಜಾವ ತಾಲೀಮಿಗೆ ಹೊರಡುವ ಮುನ್ನ ಮತ್ತು ಸಂಜೆ ತಾಲೀಮಿಗೆ ಹೊರಡುವ ವೇಳೆ ಸ್ನಾನ ಮಾಡಿಸಲಾಗುವುದು. ಬೇರೆ ಬೇರೆ ಶಿಬಿರಗಳಿಂದ ಬಂದ 9 ಆನೆಗಳೂ ಹೊಂದಿಕೊಂಡು ಹೋಗುತ್ತಿವೆ. ಎಲ್ಲವೂ ಒಂದೇ ಟೀಂ ಎಂಬ ರೀತಿಯಲ್ಲಿವೆ. ಇದರಿಂದ ಹೆಚ್ಚು ಅನುಕೂಲವಾಗುತ್ತಿದೆ ಎಂದು ಡಿಸಿಎಫ್ ಕಾರಿಕಾಳನ್ ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು ದಸರಾ: ಅರಮನೆಯೊಳಗೆ ತಾಲೀಮು ನಡೆಸಿದ ಗಜಪಡೆ

ABOUT THE AUTHOR

...view details