ಮೈಸೂರು: ಗ್ರಾಮೀಣ ಜನರು ತಮ್ಮ ನೋವು ನಲಿವುಗಳನ್ನು ಹಾಡಿನ ಮೂಲಕ ಕಟ್ಟಿ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ಸಾರಿದ ಹಲವಾರು ಜನಪದ ಗೀತೆಗಳನ್ನು, ಹೊನ್ನಾರು ಜನಪದ ಗಾಯಕರು ಶುಕ್ರವಾರ ಅರಮನೆ ಆವರಣದಲ್ಲಿ ಅನಾವರಣಗೊಳಿಸಿರು.
ನಾಡಹಬ್ಬ ದಸರಾ ನಿಮಿತ್ತ ಅರಮನೆ ವೇದಿಕೆಯಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ 7ನೇ ದಿನದಂದು ಹೊನ್ನಾರು ಜನಪದ ಗಾಯಕರು ಗ್ರಾಮೀಣ ಸೊಗಡಿನಲ್ಲಿ ಸೊಗಸಾದ ಜನಪದ ಗೀತೆಗಳ ರಸದೌತಣವನ್ನು ಶ್ರೋತೃಗಳಿಗೆ ಉಣ ಬಡಿಸಿದರು.
ಮೈಸೂರು ದಸರಾ: ಅರಮನೆ ಅಂಗಳದಲ್ಲಿ ಜನಪದ ಗೀತೆಗಳ ರಸದೌತಣ ಮೊದಲಿಗೆ ಶರಣು ಶರಣಯ್ಯ ಎಂದು ಗಜಮುಖನಿಗೆ ನಮಿಸಿದರು. ನಂತರ ಝಳ್ನೀರ್ ಜಂಗೀನ ಪಾದಕೆ, ಒಲಿದು ಮಾರಮ್ಮಯ್ಯ ಒಲಿದು ಬಾರೆ... ಜೋಗಿ ಹಾಡು, ಹೂವ ಕುಯ್ಯಾಣ ಬನ್ನಿ ಮೊಗ್ಗ ಕುಯ್ಯಾಣ ಬನ್ನಿ... ಮುದ್ದು ಭೈರವ ಸ್ವಾಮಿ ಹುಲಿಗದ್ದುಗೆ ಏರುವಾಗ...ಎಂಬ ಗೀತೆಗಳನ್ನು ಹಾಡಿ ಕೇಳುಗರನ್ನು ಪರವಶಗೊಳಿಸಿದರು.
ಜನಪದ ಗಾಯಕರಾದ ಡಾ.ಪಿ.ಕೆ.ರಾಜಶೇಖರ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ಮೈಸೂರು ಉಮೇಶ್, ಗಜಾನನ, ಚಿಕ್ಕಮಳಲಿ ಆರ್.ಮಹದೇವ, ಬಸವರಾಜು, ದಡದಳ್ಳಿ ಬ್ರಹ್ಮದೇವ್, ಶಂಭುಶಿಂಗಶೆಟ್ಟಿ, ರವಿಕುಮಾರ್ ಇಲವಾಲ ಅವರು ಜನಪದ ಗೀತೆಯನ್ನು ಪ್ರಸ್ತುತಪಡಿಸಿದರು.
ಬಳಿಕ ವಿದ್ವಾನ್ ಮೈಸೂರು ಕಾರ್ತಿಕ್ ನಾಗರಾಜ್ ವೈಯಲಿನ್‌ನಲ್ಲಿ ಹಾಗೂ ಉಸ್ತಾದ್ ಶಫಿಕ್ ಖಾನ್ ಸಿತಾರ್‌ನಲ್ಲಿ ವಿಶೇಷ ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತದ ಜುಗಲ್ ಬಂದಿಯು ವೀಕ್ಷಕರನ್ನು ಬೆರಗುಗೊಳಿಸಿತು.