ಮೈಸೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅದ್ಧೂರಿ ದಸರಾ ಆಚರಣೆ ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022 ಕಾರ್ಯಕಾರಿ ಸಮಿತಿ ಸಭೆ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಸರಳ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ವೈಭವದ ದಸರಾ ಆಚರಣೆ ಮಾಡುವ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ದಸರಾ ಉದ್ಘಾಟಕರ ಆಯ್ಕೆ ಅಧಿಕಾರ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟದ್ದು. ಉದ್ಘಾಟಕರ ಬಗ್ಗೆ ಸಲಹೆಗಳನ್ನು ನೀಡಬಹುದು. ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಕಾರ್ಯಕ್ರಮಗಳ ಆಯೋಜನೆ, ದೀಪಾಲಂಕಾರ, ವಸ್ತುಪ್ರದರ್ಶನ, ಪುಷ್ಪಪ್ರದರ್ಶನ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯಾಯಿತು. ಪಾಸ್ ವಿತರಣೆ ವಿಷಯದಲ್ಲಿ ಯಾವುದೇ ಗೊಂದಲ, ದುರ್ಬಳಕೆಗೆ ಅವಕಾಶ ನೀಡುವುದಿಲ್ಲ. ದಸರಾ ಮಹೋತ್ಸವ 2022ರ ಸಂಬಂಧ 16 ಸಮಿತಿಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಉಪಸಮಿತಿಗಳಿಂದ ಆಯೋಜಿಸುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದರು.
ಇದಕ್ಕೂ ಮುನ್ನ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಕಾರ್ಯಕ್ರಮ ಆಯೋಜನೆ, ಅನುದಾನ ಬಿಡುಗಡೆ ಕುರಿತು ಚರ್ಚೆ ನಡೆಯಿತು. ದಸರಾದಲ್ಲಿ ಪ್ರವಾಸೋದ್ಯಮ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡುವುದು ಮಾತ್ರವಲ್ಲದೆ "ಬ್ರ್ಯಾಂಡ್ ಮೈಸೂರು" ಮಾಡಲು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸುವಂತೆಯೂ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.