ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ. ದೇವೇಗೌಡರದ್ದು ಅಪಹಾಸ್ಯದ ಮೈತ್ರಿ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ವ್ಯಂಗ್ಯವಾಡಿದರು.
ಇಂದು ಪರಿಷತ್ ಚುನಾವಣಾ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಜಿ.ಟಿ ದೇವೇಗೌಡ ಒಂದಾಗಿರೋದು ಇದು ಒಂದು ರೀತಿಯ ನಗೆಪಾಟಲಿಗೀಡಾಗಿದೆ. ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಮಾಡಿದ್ದರು.
ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಜನತಾ ಪರಿವಾರ ಕಟ್ಟುತ್ತೇನೆಂದು ಓಡಾಡಿದ್ದರು. ಆದ್ರೆ, ಇದೇ ಸಿದ್ದರಾಮಯ್ಯ ರಾತ್ರೋರಾತ್ರಿ ಊರು ಬಿಟ್ಟು ಬದಾಮಿಗೆ ಹೋಗಿ ನಿಂತರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 35 ಸಾವಿರ ಮತಗಳಿಂದ ಸೋತರು.
ಆದರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ. ಇನ್ನೂ ಸಿಎಂ ಆಗಿದ್ದ ನೀವೇ, ವೀರಾವೇಷದ ಮಾತುಗಳನ್ನಾಡುವ ಸಿದ್ದರಾಮಯ್ಯ ಹೆದರಿ ಓಡಿಹೋದರೆ ಹೇಗೆ ? ಎಂದು ಪ್ರಶ್ನಿಸಿದರು.
ಅಧಿಕಾರಕ್ಕಾಗಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ನಾನೇ ಸಿಎಂ ಎನ್ನುತ್ತಿದ್ದಾರೆ. ನಿಮ್ಮ ಸ್ಥಾನವನ್ನು ಮೊದಲು ಉಳಿಸಿಕೊಳ್ಳಿ ಸಿದ್ದರಾಮಯ್ಯನವರೇ.. ಚಿಮ್ಮನಕಟ್ಟಿ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕ್ಷೇತ್ರ ತೊರೆದದ್ದು, ಮೈಸೂರಿಗರು ತಲೆ ತಗ್ಗಿಸೋ ವಿಚಾರ :ಸಿದ್ದರಾಮಯ್ಯ ಕ್ಷೇತ್ರ ತೊರೆದಿದ್ದು,ಮೈಸೂರಿಗರು ತಲೆ ತಗ್ಗಿಸುವ ವಿಚಾರ. ಬಾದಾಮಿಯಲ್ಲಿ ಹೋಗಿ ಸಿದ್ದರಾಮಯ್ಯ ನಿಂತಿದ್ದೆ ಅವರ ಅಸಹಾಯಕತೆಯನ್ನು ತೋರಿಸುತ್ತದೆ ಎಂದರು.
ಬಿಜೆಪಿಗೆ ಮೈತ್ರಿ ಬೇಕಿಲ್ಲ :ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ತಮ್ಮ ಟೀಕೆಗೆ ಆರ್ಎಸ್ಎಸ್ ಬಳಸಿಕೊಳ್ಳುವುದು ಸರಿಯಲ್ಲ. ಆರ್ಎಸ್ಎಸ್ ಒಂದು ರಾಜಕೀಯ ಪಕ್ಷವಲ್ಲ. ಹೀಗಾಗಿ, ಅದರ ಮೇಲೆ ರಾಜಕೀಯವಾಗಿ ಟೀಕೆ ಸಲ್ಲದು. ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯವಲ್ಲ. ಬಿಜೆಪಿಗೆ ಯಾರ ಮೈತ್ರಿಯೂ ಬೇಕಾಗಿಲ್ಲ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಗೆದ್ದಿದ್ದು ಎಷ್ಟು ಸ್ಥಾನ ಎಂದು ಗೊತ್ತಿದೆ. ಅತಿ ಹೆಚ್ಚು ಮತ ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ದೊಡ್ಡ ಪಕ್ಷ ಬಿಜೆಪಿ ಎಂದು ಹೇಳಿದರು.
ರಘು ಕೌಟಿಲ್ಯಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ :ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಆರ್. ರಘು ಕೌಟಿಲ್ಯಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಎಂದು ಮತದಾರರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿದರು.
ಇದನ್ನೂ ಓದಿ:ಪರಿಷತ್ ಚುನಾವಣೆಯಲ್ಲಿ ಹೆಚ್‌ಡಿಕೆ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ: ಬಿಎಸ್‌ವೈ
ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮೊದಲು ಕಾಂಗ್ರೆಸ್ ಮತ್ತು ಜನತಾ ಪಕ್ಷ ಮಾತ್ರ ಇತ್ತು. ಇದೀಗ ಬಿಜೆಪಿ ಪಕ್ಷ ಸ್ಟ್ರಾಂಗ್ ಆದ ಕಾರಣ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ರಘು ಸೋತಿದ್ದರು. ಈ ಬಾರಿ ಗೆಲ್ಲುವ ಆತ್ಮ ವಿಶ್ವಾಸ ನಮಗಿದೆ.
ಎಲ್ಲರೂ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ರಘು ಅವರನ್ನು ಮೊದಲ ಸುತ್ತಿನಲ್ಲಿ ಗೆಲ್ಲುವಂತೆ ಮಾಡಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಮತದಾರರಲ್ಲಿ ಮನವಿ ಮಾಡಿದರು.