ಮೈಸೂರು :ತಿನ್ನುವುದಕ್ಕೆ ಕುರಿ, ಕೋಳಿಗಳಿವೆ, ಅವುಗಳಿಗೆ ಯಾರು ಮಾತೆ ಎನ್ನುವುದಿಲ್ಲ, ಕಾಂಗ್ರೆಸ್‌ನವರು ಓಲೈಕೆ ರಾಜಕಾರಣ ಮಾಡುವುದನ್ನು ಬಿಡಲಿ, ಗೋಹತ್ಯೆ ಕಾಯ್ದೆ ವಿರೋಧಿಸಿ ಮತ್ಯಾರನ್ನೋ ಓಲೈಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆಗೆ ಅನುಮೋದನೆ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಇಂದು ನಗರದ ಪಿಂಜಾರಾಪೋಲ್ನಲ್ಲಿ ಹಸುಗಳಿಗೆ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಯಾವಾಗಲೂ ಓಲೈಕೆ ರಾಜಕಾರಣ ಮಾಡುತ್ತಾರೆ.
ಮೊದಲು ಅದನ್ನು ಬಿಡಿ, ಕೇವಲ ಮೃಗಾಲಯದಲ್ಲಿನ ಪ್ರಾಣಿಗಳ ಆಹಾರದ ಬಗ್ಗೆ ಕಾಳಜಿ ಇದ್ದರೆ ಹೇಳಿ, ಆ ಪ್ರಾಣಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡೋಣ. ಆ ಬಗ್ಗೆ ನಮ್ಮೊಂದಿಗೆ ನೀವು ಪ್ರತ್ಯೇಕವಾಗಿ ಚರ್ಚೆ ಮಾಡಿ, ಆಗ ನಿಮಗೆ ಉತ್ತರ ಕೊಡುತ್ತೇವೆ. ಬದಲಾಗಿ ಚರ್ಮೋದ್ಯಮ, ಆಹಾರ ಪದ್ಧತಿ ಎನ್ನುವ ಕ್ಷುಲ್ಲಕ ಕಾರಣ ಕೊಡಬೇಡಿ ಎಂದರು.
ಗೋವುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಭಾರತೀಯರು ತಾಯಿಯನ್ನು ಬಿಟ್ಟರೆ ಗೋವಿಗೆ ಮಾತ್ರ ತಾಯಿ ಸ್ಥಾನ ಕೊಟ್ಟಿದ್ದಾರೆ. ಅದನ್ನ ಅರ್ಥ ಮಾಡಿಕೊಂಡ ಯಡಿಯೂರಪ್ಪನವರು ಈ ಕಾನೂನು ಜಾರಿ ಮಾಡಿದ್ದಾರೆ. ಜೊತೆಗೆ ತಿನ್ನುವುದಕ್ಕಾಗಿ ಕುರಿ, ಕೋಳಿ ಇವೆ. ಅವುಗಳಿಗೆ ಯಾರು ಮಾತೆ ಎನ್ನುವುದಿಲ್ಲ. ಕಾಂಗ್ರೆಸ್‌ನವರು ಓಲೈಕೆ ಮಾಡುವುದು ಬಿಟ್ಟು ಬೇರೆ ರಾಜಕಾರಣ ಮಾಡಲಿ ಎಂದರು.
ದೆಹಲಿಯಲ್ಲಿ ರೈತರ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಂಜಾಬ್ ರೈತರಿಗೆ ಪಂಜಾಬ್ನಲ್ಲೇ ಬೆಂಬಲವಿಲ್ಲ. ಅದಕ್ಕಾಗಿ ದೆಹಲಿ ತನಕ ಹೋಗಿದ್ದಾರೆ. ಇದು ಮತ್ತೊಂದು ಸಿಎಎ ಹೋರಾಟ ಆಗುತ್ತೆ ಅಷ್ಟೇ.. ಸಿಎಎನಲ್ಲಿ ಯಾವ ಮುಸ್ಲಿಮರಿಗೂ ಸಮಸ್ಯೆ ಆಗುವುದಿಲ್ಲ ಎಂದರೂ ಪ್ರತಿಭಟನೆ ಮಾಡಿದರು. ಈಗ ರೈತರಿಗೆ ಸಮಸ್ಯೆ ಆಗುವುದಿಲ್ಲ ಎಂದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯ ಉದ್ದೇಶ ಬೇರೆ ಇದ್ದ ಹಾಗೇ ಕಾಣಿಸುತ್ತಿದೆ ಎಂದರು.
ಪಂಜಾಬ್ ರೈತರು ದೆಹಲಿಯಲ್ಲಿ ಏಕೆ ಬಂದು ಹೋರಾಟ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಹೋರಾಟ ಮಾಡಿದ್ರೆ ನ್ಯಾಯ ಸಿಗುವುದಿಲ್ಲವೇ?. ದೆಹಲಿಯಲ್ಲಿ ಹಲವು ದೇಶದ ರಾಯಭಾರಿ ಕಚೇರಿ ಇವೆ. ಸೇನೆಯ ಹಲವು ಭದ್ರತಾ ಕಚೇರಿಗಳಿಗೆ, ಸೂಕ್ಷ್ಮ ಪ್ರದೇಶಕ್ಕೆ ನುಗ್ಗಿ ಪ್ರತಿಭಟನೆ ಮಾಡುವ ಉದ್ದೇಶ ಏನು ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.