ಮೈಸೂರು: 'ನಿಮ್ಮ ಹೆಸರಲ್ಲೇ ಸ್ವಂತಿಕೆ ಇಲ್ಲ. ರಾಜೀವ್ ಗಾಂಧಿ ಮಗಳ ಹೆಸರನ್ನು ಇಟ್ಟುಕೊಂಡಿದ್ದೀರಾ' ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಶಾಸಕ ಪ್ರಿಯಾಂಕ್ ಖರ್ಗೆ (MLA Priyank Kharge) ಬಗ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 'ಮರಿಖರ್ಗೆ ನನಗೆ ಪೇಪರ್ ಸಿಂಹ ಅಂದರೆ ಬೇಸರ ಇಲ್ಲ. ನಾನು ಪತ್ರಿಕೆ ಮೂಲಕವೇ ಘರ್ಜಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಆದ್ರೆ ಪ್ರಿಯಾಂಕ್ ಖರ್ಗೆ (Priyank Kharge) ಹೆಸರಿನಲ್ಲಿ ಗಂಡೋ, ಹೆಣ್ಣೋ ಎಂಬ ಕ್ಲ್ಯಾರಿಟಿ ಇಲ್ಲ. ಹೆಸರಿನಲ್ಲೇ ಮರಿ ಖರ್ಗೆಗೆ ಸ್ವಂತಿಕೆ ಇಲ್ಲ' ಎಂದು ವ್ಯಂಗ್ಯವಾಡಿದರು.
'ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಕುಟುಕಿದರು. ರಾಜ್ಯ ಕಾಂಗ್ರೆಸ್‌ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ಅಕಸ್ಮಾತ್ ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು (Hacker Shreeki) ನಾವು ಏಕೆ ಬಂಧಿಸುತ್ತಿದ್ದೆವು?' ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.
'ಸಿದ್ದರಾಮಯ್ಯರದ್ದು ಉಗಿದು ಓಡಿ ಹೋಗುವ ವ್ಯಕ್ತಿತ್ವ. ಯಾವ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೀರಾ?' ಎಂದರು.
ಕಾಂಗ್ರೆಸ್ ನಾಯಕರಿಗೆ ಸವಾಲು:
'ನಿಮ್ಮ ಯಾವ ಅಕೌಂಟ್ ಹ್ಯಾಕ್ ಆಗಿದೆ ಬಹಿರಂಗಪಡಿಸಿ. ಒಂದೇ ಒಂದು ಅಕೌಂಟ್ ನಂಬರ್ ಕೊಡಿ. ಒಂದು ಸಾವಿರ ಕಳೆದುಕೊಂಡರೂ ಇವತ್ತು ದೂರು ಕೊಡ್ತಾರೆ. ಏಳು ಸಾವಿರ ಕೋಟಿ ಅಂದ್ರೆ ಯಾಕೆ ದೂರು ಕೊಟ್ಟಿಲ್ಲ. ನಿಮ್ಮ ಧರ್ಮ ಸಂಕಟ ಏನು ಅಂತ ನನಗೆ ಚೆನ್ನಾಗಿ ಗೊತ್ತು. ಹಿಂದೆ ಪರ್ಸಂಟೇಜ್ ಪಡೆದಿದ್ದರಿಂದಲೇ 2018ರಲ್ಲಿ ಹೀನಾಯ ಸೋಲು ಕಂಡಿದ್ದು. ನಿಮ್ಮವರೇ ಹೂಡಿರುವ ಅಕೌಂಟ್ ಹ್ಯಾಕ್ ಆಗಿರಬೇಕು ನೋಡಿ' ಎಂದು ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದರು.
'ಯಾರೋ ಬರೆದು ಕೊಟ್ಟ ಬಜೆಟ್ ಅನ್ನು ಓದಿದಂತಲ್ಲ. 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಬಿಟ್ ಕಾಯಿನ್ ಬಗ್ಗೆ ಗೊತ್ತಿರಬೇಕಲ್ವಾ. ದಯಮಾಡಿ ಜನಸಾಮಾನ್ಯರಿಗೆ ಬಿಟ್ ಕಾಯಿನ್ ಬಗ್ಗೆ ಹೇಳಿ. ಮಾತೆತ್ತಿದರೆ ಮೋದಿ ಬಗ್ಗೆ ಟೀಕಿಸುತ್ತೀರಾ' ಎಂದು ಕುಟುಕಿದರು.