ಮೈಸೂರು :ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಜನರು ತುಂಬಾ ನೊಂದಿದ್ದಾರೆ. ಹೆಚ್ಚಿನ ಜನ ಲಸಿಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಲಾಕ್‌ಡೌನ್ ಕರ್ಫ್ಯೂ ಬೇಡ. ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ರ‍್ಯಾಲಿಗಳು, ಪ್ರಚಾರಗಳು ನಡೆಯುತ್ತಿವೆ. ಹೀಗಿರುವಾಗ ಕರ್ನಾಟಕದಲ್ಲಿ ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ ಏಕೆ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಸರ್ಕಾರ ಜನರನ್ನು ಭೀತಿಗೊಳಿಸುವುದನ್ನ ನಿಲ್ಲಿಸಬೇಕು. ಜನರ ಜೀವ ಮತ್ತು ಜೀವನ ಎರಡು ಮುಖ್ಯ. ಜೀವ ಉಳಿಸಿಕೊಳ್ಳಲು ಲಸಿಕೆ ಕೊಟ್ಟಾಗಿದೆ.
ಈ ಸಂದರ್ಭದಲ್ಲಿ ಕರ್ಫ್ಯೂ, ಲಾಕ್‌ಡೌನ್ ತೆರೆಯಿರಿ. ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಕೇಂಡ್ ಲಾಕ್‌ಡೌನ್ ತೆರವುಗೊಳಿಸಿ ಎಂದು ಪರೋಕ್ಷವಾಗಿ ಸಿಎಂಗೆ ಮನವಿ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು
ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗದಿದ್ದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯಾಗಿ ಕಾಣುತ್ತದೆ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ವರ್ತನೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕ್ಯಾಂಟೀನ್‌ಗೆ ಹೆಸರಿಡುವಾಗ ಈ ಮಹಾಪುರುಷರ ಹೆಸರು ನೆನಪಾಗಲಿಲ್ಲ. ಆಗ ನೆನಪಾಗಿದ್ದು ಇಂದಿರಾಗಾಂಧಿ ಮಾತ್ರ. ಅಧಿಕಾರ ಇದ್ದಾಗ ಸಿದ್ದರಾಮಯ್ಯನವರಿಗೆ ನಾಯರಣ ಗುರು, ಒನಕೆ ಓಬವ್ವ, ಮೈಸೂರು ಮಹಾರಾಜರು, ನೆನಪಾಗಲಿಲ್ಲ. ಈಗ ನೆನಪಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿರುತ್ತಾರೆ. ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ದ ಚಿತ್ರ ಮಾಡಿರುತ್ತಾರೋ ಅದರ ಗುಣಮಟ್ಟದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಮೊದಲು ಸಿದ್ದರಾಮಯ್ಯ ಗಣರಾಜ್ಯೋತ್ಸವ ಸ್ತಬ್ಧ ಚಿತ್ರಗಳ ಆಯ್ಕೆ ಮಾರ್ಗಸೂಚಿ ಓದಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಬಗ್ಗೆ ವಿಶೇಷ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸಿಎಂ