ಮೈಸೂರು: ಶರನ್ನವರಾತ್ರಿಯ ದಿನಗಳಲ್ಲಿ ಹೆಚ್ಚಿನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಮೂರು ಪಟ್ಟು ಆದಾಯ ಸಂಗ್ರಹವಾಗಿದೆ.
ಚಾಮುಂಡಿ ಬೆಟ್ಟಕ್ಕೆ ಅಕ್ಟೋಬರ್ 7 ರಿಂದ 15ರವರೆಗೆ 74,480 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ 40.11 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್ 7 ರಿಂದ 15 ರವರೆಗೆ 9,825 ಮಂದಿ ಬೆಟ್ಟಕ್ಕೆ ಭೇಟಿ ನೀಡಿದ್ದು, 6.6 ಲಕ್ಷ ರೂ. ಸಂಗ್ರಹವಾಗಿತ್ತು.
ಭಕ್ತರ ಸಂಖ್ಯೆ ಹೆಚ್ಚಳ:
ಅಕ್ಟೋಬರ್ 7 ರಂದು 1500 ಮಂದಿ ಭೇಟಿ ನೀಡಿದರೆ, ಅ.8 ರಂದು 1,500, ಅ.9 ರಂದು 2,735, ಅ.10 ರಂದು 8,463, ಅ.11 ರಂದು 13,350, ಅ.12 ರಂದು 6,907, ಅ.13 ರಂದು 8,707, ಅ.14 ರಂದು 5,307 ಹಾಗೂ ವಿಜಯದಶಮಿಯಂದು 20,703 ಮಂದಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದರು.
ಲಾಕ್ಡೌನ್ ತೆರವಿನ ನಂತರ ಕಳೆದ ಮೂರು ತಿಂಗಳಲ್ಲಿ ಮೈಸೂರಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದ್ದು, ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಅಲ್ಲದೇ ದಸರಾ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿದ ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಕಾರಣದಿಂದಾಗಿ ಆದಾಯ ಹೆಚ್ಚಾಗಿದೆ.
ಇದನ್ನೂ ಓದಿ:ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಚಾಲನೆ
'ಕಳೆದ ಬಾರಿಯೂ ದಸರಾವನ್ನು ಕೋವಿಡ್ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗಿದ್ದು, ನಿಯಮ ಪಾಲನೆ ಕೂಡ ಕಟ್ಟುನಿಟ್ಟಾಗಿತ್ತು. ಆದರೆ ಈ ಬಾರಿ ಲಸಿಕೆ ನೀಡಿದ ಕಾರಣಕ್ಕಾಗಿ ಹೆಚ್ಚು ಭಕ್ತರು ಆಗಮಿಸಿದ್ದಾರೆ. ಕೋವಿಡ್ ಭಯ ಜನರಲ್ಲಿ ಕಡಿಮೆಯಾಗಿದೆ. ದಸರಾ ವೇಳೆ ಎಂದಿನಂತೆಯೇ ಸಾಂಪ್ರದಾಯಿಕವಾಗಿ ಚಾಮುಂಡಿ ದೇವಾಲಯವನ್ನು ಅಲಂಕರಿಸಲಾಗಿತ್ತು. ಸರದಿ ಸಾಲುಗಳಲ್ಲಿ ನಿಂತು ಭಕ್ತರು ದರ್ಶನ ಪಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿತ್ತು. ವಿಜಯದಶಮಿ ನಂತರ ಕೂಡ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಅಕ್ಟೋಬರ್ 24ರ ನಂತರ ಕಡಿಮೆಯಾಗಬಹುದು'.
- ಯತಿರಾಜ್, ಚಾಮುಂಡೇಶ್ವರಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ