ಮೈಸೂರು: ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಆಹ್ವಾನಿಸಿ ಬಸವರಾಜ ಬೊಮ್ಮಾಯಿ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗುಣಗಾನ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣರನ್ನು ಆಹ್ವಾನ ಮಾಡಿರುವುದು ಸ್ವಾಗತಾರ್ಹ.
ರಾಜಕಾರಣದ ಬಗ್ಗೆ ಇದ್ದ ತಾತ್ಸಾರದ ಮನೋಭಾವ ದೂರ ಮಾಡುವ ನಿಟ್ಟಿನಲ್ಲಿ ಇದೊಂದು ಸೂಕ್ತ ತೀರ್ಮಾನ. ಈವರೆಗೂ ಸಾಹಿತಿ, ವಿಜ್ಞಾನಿಗಳು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ದಸರಾವನ್ನು ಉದ್ಘಾಟಿಸಿದ್ದರು. ಈ ಬಾರಿ ರಾಜಕೀಯ ಕ್ಷೇತ್ರದ ಎಸ್.ಎಂ. ಕೃಷ್ಣ ಅವರು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಎಸ್.ಎಂ. ಕೃಷ್ಣ ಅವರು ಹಿರಿಯ ರಾಜಕಾರಣಿಗಳು, ಜನಾದೇಶ ಪಾಲಿಸಿ ಆಡಳಿತ ನಡೆಸಿದವರು. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸತತ ಮೂರು ವರ್ಷ ಬರಗಾಲ ಎದುರಾಯಿತು. ಡಾ. ರಾಜಕುಮಾರ್ ರನ್ನು ವೀರಪ್ಪನ್ ಅಪಹರಿಸಿದ್ದನು. ಮಾಜಿ ಸಚಿವ ನಾಗಪ್ಪನವರ ಹತ್ಯೆಯಾಯಿತು. ಇಂತಹ ಹಲವು ಸಮಸ್ಯೆಗಳ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಎಸ್.ಎಂ.ಕೃಷ್ಣ ಕಾಲದಲ್ಲಿ ಐಟಿಬಿಟಿ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಯಿತು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಜಾಗತೀಕವಾಗಿ ಗುರುತಿಸಿಕೊಳ್ಳುವಂತಾಯಿತು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಕೃಷ್ಣರವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ದಸರಾಕ್ಕಿರುವ ಮಹತ್ವದಷ್ಟೇ ಕೃಷ್ಣ ಅವರ ಮಹತ್ವವನ್ನು ಸಾರುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ನಾಡಹಬ್ಬ ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಿಸಿದ ಸಿಎಂ ಬೊಮ್ಮಾಯಿ..
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಎಲ್ಲ ವಿಚಾರಗಳಲ್ಲೂ ಹೈ ಕ್ಲಾಸ್ ಆಗಿ ಸಾಗುತ್ತಿದೆ ಎಂದು ಶ್ಲಾಘಿಸಿದರು.