ಮೈಸೂರು :ವಿಧಾನ ಪರಿಷತ್ ಚುನಾವಣೆ ನಡೆಯುವ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಮತದಾರರಿಗಿಂತಲೂ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್ ಹಾಲಿ ಸದಸ್ಯ ಸಂದೇಶ್ ನಾಗರಾಜ್ ಬೆಂಬಲ ಕೋರಿ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದಾರೆ.
ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಜಿ.ಡಿ.ಹರೀಶ್ ಗೌಡ ಚಾಮುಂಡೇಶ್ವರಿ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರ ಮೇಲೆ ಹಿಡಿತ ಹೊಂದಿದ್ದಾರೆ. ಸಂದೇಶ್ ನಾಗರಾಜ್ ಸತತ ಎರಡು ಬಾರಿ ಆಯ್ಕೆಯಾಗಿ, ದ್ವಿಸದಸ್ಯ ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ.
ಈ ಕಾರಣದಿಂದಾಗಿ ಇಬ್ಬರ ಮನೆಗಳಿಗೆ ಅಭ್ಯರ್ಥಿಗಳು ತೆರಳಿ ಬೆಂಬಲ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಂದೇಶ್ ನಾಗರಾಜ್ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ಜಿ.ಟಿ.ದೇವೇಗೌಡ ತಮ್ಮ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.
ಬಿಜೆಪಿ ಅಭ್ಯರ್ಥಿ ಆರ್.ರಘು, ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರುಗಳು ಜಿ ಟಿ ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ಫೋಟೋ ತೆಗೆಸಿಕೊಂಡು ಅವರ ಬೆಂಬಲಿಗ ಸದಸ್ಯರ ಬಳಿ ಹೋಗಿ ಮತಯಾಚಿಸುತ್ತಿದ್ದಾರೆ.
ಹಾಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮೊದಲು ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿ, ಅದು ಸಾಧ್ಯವಾಗದಿದ್ದಾಗ ಮತ್ತೆ ಜೆಡಿಎಸ್‌ನಿಂದ ಟಿಕೆಟ್ ಪಡೆಯಲು ಹೋಗಿ ಸೋತಿದ್ದರು.