ಮೈಸೂರು:ವಿಧಾನ ಪರಿಷತ್ಗೆ ಹೆಚ್.ವಿಶ್ವನಾಥ್ ಅವರನ್ನು ನಾಮನಿರ್ದೇಶನ ಮಾಡಿರುವುದು ಅಸಿಂಧು. ಇದು ಸುಪ್ರೀಂಕೋರ್ಟ್ನ ಆದೇಶದ ಉಲ್ಲಂಘನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡುವುದಕ್ಕೆ ಅವಕಾಶ ಇಲ್ಲ. ಸುಪ್ರೀಂಕೋರ್ಟ್ನ ಆದೇಶದ ಪ್ರಕಾರ ವಿಶ್ವನಾಥ್ ಅವರಿಗೆ ಪರಿಷತ್ ಸ್ಥಾನವಲ್ಲದೆ ಯಾವುದೇ ನಿಗಮ ಮಂಡಳಿ ಅಧ್ಯಕ್ಷರಾಗಿ ಕೂಡ ನೇಮಕ ಮಾಡುವಂತಿಲ್ಲ. ಅವರು ಪರಿಷತ್ ಸದಸ್ಯರಾಗಿ ಆಯ್ಕೆ ಆಗಿರುವುದು ರಾಜ್ಯ ರಾಜಕೀಯದ ದೊಡ್ಡ ದುರಂತ ಎಂದರು.
ಹೆಚ್ ವಿಶ್ವನಾಥ್ ಆಯ್ಕೆಗೆ ಸಾ. ರಾ. ಮಹೇಶ್ ಆಕ್ಷೇಪ ಕರ್ನಾಟಕದ ರಾಜ್ಯಪಾಲರಿಗೆ ಕನ್ನಡವೂ ಬರುವುದಿಲ್ಲ, ಇಂಗ್ಲಿಷ್ ಬರುವುದಿಲ್ಲ. ರಾಜ್ಯಪಾಲರು ಸುಪ್ರೀಂಕೋರ್ಟ್ ಆದೇಶದ 110ನೇ ಪುಟವನ್ನು ನೋಡಲಿ ಎಂದ ಸಾ.ರಾ. ಮಹೇಶ್, ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಸ್ವೀಕರಿಸಲು ಅವಕಾಶ ಕೊಡಬೇಡಿ ಎಂದು ರಾಜ್ಯಪಾಲರಿಗೆ ಹಾಗೂ ವಿಧಾನಸಭಾ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ಏನಾದರೂ ಪ್ರಮಾಣವಚನ ಸ್ವೀಕರಿಸಲು ಅವಕಾಶ ಕೊಟ್ಟರೆ ಸುಪ್ರೀಂ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಸಾ.ರಾ. ಮಹೇಶ್ ತಿಳಿಸಿದರು.
ಸಾಹಿತ್ಯ ಕ್ಷೇತ್ರದಿಂದ ವಿಶ್ವನಾಥ್ ಆಯ್ಕೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ಮುಂದೆ ಆದರೂ ರಾಜಕೀಯ ಕ್ಷೇತ್ರ ಶುದ್ಧಿಯಾಗಲಿ ಎಂದು ವ್ಯಂಗ್ಯವಾಡಿದ ಸಾ.ರಾ. ಮಹೇಶ್, ಪುಸ್ತಕ ಬರೆಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿ ವಿಧಾನ ಪರಿಷತ್ಗೆ ಆಯ್ಕೆಯಾಗಿರುವುದು ದುರಂತ ಎಂದು ಟೀಕಿಸಿದರು.
ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲಿಸುವುದಿಲ್ಲ. ಜನತಾ ನ್ಯಾಯಾಲಯದಲ್ಲಿ ಈ ರಾಜಕಾರಣಿ ಕುರಿತು, ಬ್ಲಾಕ್ ಮೇಲ್ ರಾಜಕಾರಣಿ ಬಗ್ಗೆ ತಿಳಿಸುತ್ತೇನೆ. ಬೇರೆಯವರು ಈ ವಿಚಾರವನ್ನು ಸುಪ್ರೀಂನಲ್ಲಿ ಪ್ರಶ್ನಿಸಲಿದ್ದಾರೆ ಎಂದು ತಿಳಿಸಿದರು. ಮೈಸೂರು ಮೈಮುಲ್ ಡೈರಿ ನೇಮಕಾತಿ ಅಕ್ರಮದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸುವುದಾಗಿ ಇದೇ ಸಂದರ್ಭದಲ್ಲಿ ಶಾಸಕ ಮಹೇಶ್ ಹೇಳಿದರು.