ಕರ್ನಾಟಕ

karnataka

ETV Bharat / city

ಹುಚ್ಚಗಣಿಯಲ್ಲಿ ಮಹದೇವಮ್ಮ ದೇವಸ್ಥಾನದ ಪುನರ್ ನಿರ್ಮಾಣ ನನ್ನ ಜವಾಬ್ದಾರಿ: ಶಾಸಕ ಹರ್ಷವರ್ಧನ್ - huchagani temple isuue

ಹುಚ್ಚಗಣಿ ದೇವಸ್ಥಾನ ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಂತ ನಾನು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಹುಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಸ್ಥಾನ ಪುನರ್ ನಿರ್ಮಾಣ ನನ್ನ ಜವಾಬ್ದಾರಿ ಎಂದು ಶಾಸಕ ಹರ್ಷವರ್ಧನ್ ಗ್ರಾಮಸ್ಥರಿಗೆ ಭರವಸೆ ನೀಡಿದರು.

mla harshavardhan says the we will reconstruct a tmple in huchagani
ಹುಚ್ಚಗಣಿ ಗ್ರಾಮಕ್ಕೆ ಶಾಸಕ ಹರ್ಷವರ್ಧನ್ ಭೇಟಿ

By

Published : Sep 28, 2021, 8:49 AM IST

Updated : Sep 28, 2021, 11:45 AM IST

ಮೈಸೂರು: ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಸ್ಥಾನ ಪುನರ್ ನಿರ್ಮಾಣ ನನ್ನ ಜವಾಬ್ದಾರಿ. ಈ ವಿಷಯದಲ್ಲಿ ಕೆಲವರು ನನ್ನ ತೇಜೋವಧೆ ಮಾಡಲು ಹುನ್ನಾರ ನಡೆಸಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ ಎಲ್ಲರಿಗೂ ಸಮಾಧಾನವಾಗುವಂತೆ ದೇವಸ್ಥಾನ ಪುನರ್ ನಿರ್ಮಾಣ ಮಾಡಿಸುತ್ತೇನೆ ಎಂದು ಶಾಸಕ ಹರ್ಷವರ್ಧನ್ ಗ್ರಾಮಸ್ಥರಿಗೆ ಭರವಸೆ ನೀಡಿದರು.

ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಶಾಸಕರ ಪ್ರಯತ್ನ

ತಾಲೂಕಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನ ತೆರವುಗೊಳಿಸಿದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಯಾರು ಏನೇ ಮಾತನಾಡಲಿ. ಜನರು ಯಾವುದೇ ಸಂಶಯ, ಆತಂಕ ಇಟ್ಟುಕೊಳ್ಳುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ.

ಹುಚ್ಚಗಣಿ ಗ್ರಾಮಕ್ಕೆ ಶಾಸಕ ಹರ್ಷವರ್ಧನ್ ಭೇಟಿ

ಬೇರೆಡೆಗಿಂತ ಹೆಚ್ಚಿನ ದೇವಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆದರೆ ಹುಚ್ಚಗಣಿ ದೇವಸ್ಥಾನ ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಾಗಂತ ನಾನು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಯಾರ್ಯಾರ ಜೊತೆ ಮಾತನಾಡಬೇಕೋ, ಪುನರ್ ನಿರ್ಮಾಣಕ್ಕೆ ಏನಾಗಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹೇಳಿದರು.

5 ಲಕ್ಷ ರೂ. ಚೆಕ್​​ ಹಸ್ತಾಂತರ:

ದೇವಾಲಯ ಪುನರ್ ನಿರ್ಮಾಣಕ್ಕೆ ನನ್ನ ಸ್ವಂತ ಬೆವರಿನಿಂದ ದುಡಿದ 5 ಲಕ್ಷ ರೂ. ಕೊಡುವುದಾಗಿ ಗ್ರಾಮದ ಮುಖಂಡರಿಗೆ ತಿಳಿಸಿದ ಅವರು, ವಾರದೊಳಗೆ ಚೆಕ್ ಅನ್ನು ನಿಮಗೆ ಹಸ್ತಾಂತರಿಸುತ್ತೇನೆ ಎಂದರು.

ನಾನು ಅಭಿವೃದ್ದಿ ಕೆಲಸ ಮಾಡಿದ್ದೇನೆ:

ಹಿಂದೆ ಇದ್ದಂತಹ ಶಾಸಕರು ನಿಮ್ಮ ಊರು ಸಣ್ಣ ಗ್ರಾಮವೆಂದು ತಿಳಿದು ಯಾವುದೇ ಅನುದಾನ ನೀಡಿರಲಿಲ್ಲ. ನಾನು ಶಾಸಕನಾಗಿ ಆಯ್ಕೆಯಾಗಿ ಬಂದ ನಂತರ ನಿಮ್ಮೂರಿನ ಮುಖ್ಯರಸ್ತೆ ಹಾಗೂ ಚರಂಡಿ ಮತ್ತು ಕಾಂಕ್ರೀಟ್ ರಸ್ತೆಗಳಿಗೆ ಸುಮಾರು ಒಂದು ಕೋಟಿ ರೂ. ಅನುದಾನ ನೀಡಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಹಾಗೆಯೇ ಈಗ ನನ್ನ ಸ್ವಂತ ಹಣದಲ್ಲಿ ನಿಮಗೆ 5 ಲಕ್ಷ ರೂ.ಗಳನ್ನು ಒಂದು ವಾರದೊಳಗೆ ಚೆಕ್ ಮೂಲಕ ನೀಡುತ್ತೇನೆ.

ಗ್ರಾಮಸ್ಥರು ಪಕ್ಷಾತೀತವಾಗಿ ಸೇರಿ ಟ್ರಸ್ಟ್ ಮಾಡಿಕೊಂಡು ಜಾಗವನ್ನು ಅಳತೆ ಮಾಡಿ ದಾಖಲೆ ಮಾಡಿಕೊಳ್ಳಿ. ಸ್ಥಳಕ್ಕೆ ಇಂಜಿನಿಯರ್ ಕರೆಸಿ ಅಂತಿಮಗೊಳಿಸೋಣ. ನಾನು ಆಡಿದ ಮಾತಿನಂತೆ ನಡೆದುಕೊಳ್ಳುತ್ತೇನೆ. ಮಹದೇವಮ್ಮ ದೇವಾಲಯ ಪುನರ್ ನಿಮಾ೯ಣದ ಜವಾಬ್ದಾರಿ ನನಗೆ ಬಿಡಿ ಎಂದು ಶಾಸಕರು ಅಭಯ ನೀಡಿದರು.

'ನಂಜನಗೂಡು ಶಾಂತಿಯಗೂಡು' ಎಂಬ ಸಂದೇಶ ಸಾರೋಣ:

ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ದೇವಸ್ಥಾನಗಳನ್ನು ನಾನು ಉಳಿಸಿಕೊಂಡಿದ್ದೇನೆ. ಹುಚ್ಚಗಣಿ ದೇವಸ್ಥಾನವನ್ನು ಮಾತ್ರ ಬೇರೆ ಬೇರೆ ಕಾರಣಗಳಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೇರೆಡೆ ಅನೇಕ ದೇವಸ್ಥಾನಗಳನ್ನು ಕೆಡವಲಾಗಿದೆ. ಆದರೆ ಹುಚ್ಚಗಣಿ ದೇವಸ್ಥಾನ ಕೆಡವಿದ್ದು ಮಾತ್ರ ಭಾರಿ ಪ್ರಚಾರ ಪಡೆಯಿತು. ನಾವೆಲ್ಲ ಸುಪ್ರೀಂಕೋರ್ಟ್ ಮತ್ತು ಸಂವಿಧಾನಕ್ಕೆ ತಲೆ ಬಾಗಲೇಬೇಕಾಗಿದೆ. ಗ್ರಾಮಸ್ಥರು ಇತರರ ಮಾತುಗಳನ್ನು ಕೇಳದೆ ಗ್ರಾಮದಲ್ಲಿ ಶಾಂತಿ - ಸಾಹೌರ್ದತೆ ಕಾಪಾಡಿಕೊಳ್ಳಬೇಕಿದೆ. ಈ ಮೂಲಕ 'ನಂಜನಗೂಡು ಶಾಂತಿಯಗೂಡು' ಎಂಬ ಸಂದೇಶವನ್ನು ಸಾರಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ:ಶಾಲಾಭಿವೃದ್ಧಿಗೆ ಪಿಎಂ, ಸಿಎಂಗೆ ಪತ್ರ.. ವಿದ್ಯಾರ್ಥಿ ಮನವಿಗೆ ಸ್ಪಂದಿಸಿದ ಸರ್ಕಾರ: ಶಾಲೆಗೆ ಬಿಇಒ ಭೇಟಿ

ಇನ್ನೂ ದೇವಾಲಯ ನಿರ್ಮಾಣಕ್ಕಾಗಿ ನಾಗೇಗೌಡ ಎಂಬುವವರು ತನ್ನ ಜಮೀನಿನಲ್ಲಿ 5 ಗುಂಟೆ ಜಾಗ ನೀಡುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿಗೆ ಮುಖ ತೋರಿಸಲು ಆಗ್ತಿಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂದು ಶಾಸಕ ಹರ್ಷವರ್ಧನ್ ಬೇಸರ ವ್ಯಕ್ತಪಡಿಸಿದರು. ಹರ್ಷವರ್ಧನ್ ಬಿಜೆಪಿ ತೊರೆಯುತ್ತಿದ್ದಾರೆ ಎಂಬ ವಿಚಾರವಾಗಿ ನಂಜನಗೂಡು ತಾಲೂಕಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಚರ್ಚೆಗೆ ಗ್ರಾಸವಾಗಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡಿ, ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು.

ಬಿಜೆಪಿ ಪಕ್ಷ ಬಿಡುವ ಯಾವುದೇ ಪ್ರಶ್ನೆ ನಮ್ಮ ಮುಂದೆ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರನ್ನೇ ಬಿಜೆಪಿಗೆ ಕರೆ ತರಲು ಪ್ರಯತ್ನಿಸುತ್ತಿದ್ದೇನೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಹರ್ಷವರ್ಧನ್ ಬಿಜೆಪಿ ಪಕ್ಷವನ್ನು ತೊರೆಯುವ ಮುನ್ಸೂಚನೆ ಇದೆ ಎಂದು ಮಾಧ್ಯಮಗಳು ಬಿಂಬಿಸಿವೆ‌ ಎಂದರು.

ನನ್ನನ್ನು ಯಾವುದೇ ಮಾಧ್ಯಮದವರು ದೂರವಾಣಿ ಕರೆ ಮಾಡಿಯೂ ಸಹ ಈ ವಿಚಾರವಾಗಿ ಪ್ರಶ್ನಿಸಿಲ್ಲ. ಇದನ್ನು ನೋಡಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಯಿರವರು ನನ್ನನ್ನು ಪದೇ ಪದೆ ಪ್ರಶ್ನಿಸುತ್ತಿದ್ದಾರೆ. ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಮುಖ ತೋರಿಸಬೇಕು. ಇದೊಂದು ರೀತಿಯ ಅಪಮಾನಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಪಕ್ಷದವರಿಗೇನೆ ನನ್ನ ಕ್ಷೇತ್ರದ ಅಭಿವೃದ್ಧಿಯನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಹಿತಶತ್ರುಗಳೇ ಇಂತಹ ಕೆಲವು ಸಮಸ್ಯೆಗಳನ್ನು ಉದ್ಭವಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಸ್ಪಷ್ಟನೆ ನೀಡಿದರು.

Last Updated : Sep 28, 2021, 11:45 AM IST

ABOUT THE AUTHOR

...view details