ಮೈಸೂರು:ಚಿನ್ನಾಭರಣ ಪತ್ತೆ ಮತ್ತು ಗ್ಯಾಂಗ್ ರೇಪ್ ಪ್ರಕರಣಗಳಲ್ಲಿ ಮೈಸೂರು ಪೊಲೀಸರು ದಕ್ಷತೆ ಮೆರೆದಿದ್ದಾರೆ. ಸದ್ಯಕ್ಕೆ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡುವುದಿಲ್ಲ. ಇನ್ನು ಮುಂದೆ ಈ ರೀತಿ ಘಟನೆಗಳು ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಈ ಬಾರಿ ದಸರಾವನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಸೆಪ್ಟೆಂಬರ್ 3ರಂದು ದಸರಾ ಉನ್ನತ ಮಟ್ಟದ ಸಭೆ ಕರೆದಿದ್ದು, ಅಲ್ಲಿ ಕೂಲಂಕಷವಾಗಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಆ ನಂತರ ಸೆಪ್ಟೆಂಬರ್ 8ರಂದು ಮೈಸೂರಿನಲ್ಲಿ ಜಿಲ್ಲಾಮಟ್ಟದ ಸಭೆ ಮಾಡಿ ಕೊರೊನಾದ ಬಗ್ಗೆ ಚರ್ಚಿಸಿ ಯಾವ ರೀತಿ ದಸರಾ ಮಾಡಬೇಕು ಎಂಬುದನ್ನು ತೀರ್ಮಾನ ಕೈಗೊಳ್ಳುತ್ತೇವೆ. ನಿನ್ನೆ ನಡೆದ ಸಿಎಂ ಸಭೆಯಲ್ಲಿ ನಾನು ಸಹ ಇದ್ದೆ. ಕೊರೊನಾ ಕೇಸ್ಗಳು ನೂರು ದಾಟುತ್ತಿಲ್ಲ. ಆದ್ದರಿಂದ ವೀಕೆಂಡ್ ಕರ್ಫ್ಯೂವನ್ನು ತೆಗೆಯುವಂತೆ ಮನವಿ ಮಾಡಿದ್ದೆ. ಅದರಂತೆ ವೀಕೆಂಡ್ ಕರ್ಫ್ಯೂ ತೆಗೆದಿದ್ದಾರೆ ಎಂದರು.