ಮೈಸೂರು:ಲಸಿಕೆ ಪಡೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳಿ ಎಂದು ಆದಿವಾಸಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಜಾಗೃತಿ ಮೂಡಿಸಿದರು.
ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆಯ ಹಾಡಿಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಲಸಿಕೆ ಪಡೆದುಕೊಳ್ಳುವುದರಿಂದ ಸಾವು ಸಂಭವಿಸುವುದಿಲ್ಲ. ದೇಶದಲ್ಲಿ ಹಲವಾರು ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ. ಯಾರಿಗೂ ಯಾವ ತೊಂದರೆ ಉಂಟಾಗಿಲ್ಲ ಎಂದರು.
ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸಲು 'ವೈದ್ಯರ ನಡಿಗೆ ಹಳ್ಳಿಯ ಕಡೆಗೆ' ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವೈದ್ಯರ ತಂಡ ಹಳ್ಳಿಗಳ ಕಡೆ ತೆರಳಲಿದೆ. ಅದೇ ವೈದ್ಯರ ತಂಡಕ್ಕೆ ಹಾಡಿಗಳಿಗೆ ಭೇಟಿ ನೀಡಲು ಸೂಚಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಹೆಚ್.ಡಿ.ಕೋಟೆಯ ಏಕಲವ್ಯ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಸೋಂಕಿತರ ಅಹವಾಲು ಸ್ವೀಕರಿಸಿದರು. ಸೋಂಕಿತರು ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು. ಮತ್ತೊಮ್ಮೆ ಈ ಕಡೆ ಬಂದಾಗ ಯಾವುದೇ ದೂರುಗಳು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಓದಿ:"ಹೆಚ್ಚು ಸೋಂಕು ಕಂಡುಬಂದ ಗ್ರಾಮಗಳಲ್ಲಿ ಅಧ್ಯಯನ, ಕೊರೊನಾ ತಡೆಗೆ ಮಾರ್ಗೋಪಾಯ"