ಮೈಸೂರು:ಜನರ ಆರೋಗ್ಯದ ದೃಷ್ಟಿಯಿಂದ ಇಂದಿನ ಪರಿಸ್ಥಿತಿಯಲ್ಲಿ ಮೇಕೆದಾಟಿಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನ ಕೈ ಬಿಟ್ಟರೆ ಒಳ್ಳೆಯದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮೇಕೆದಾಟು ಪಾದಯಾತ್ರೆ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ಇಂದು ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ದಿನೇ ದಿನೆ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಜತೆಗೆ ಬೇರೆ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಬಂದ ವ್ಯಕ್ತಿಗಳಿಂದಲೂ ಒಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದೆ.
ಕಳೆದ ವರ್ಷ 2ನೇ ಅಲೆಯಲ್ಲಿ ಸಾಕಷ್ಟು ಅನಾಹುತ ಆಗಿದೆ. ಇದು 3ನೇ ಅಲೆಯಲ್ಲಿ ಮರುಕಳಿಸಬಾರದು. ಇದನ್ನ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಂಡು ಜನರ ಹಿತ ದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಬೇಕು ಎಂದು ಸಲಹೆ ನೀಡಿದರು.
ತಜ್ಞರ ಸಲಹೆಯ ಮೇರೆಗೆ ಲಾಕ್ಡೌನ್ ಬಗ್ಗೆ ನಿರ್ಧಾರ:
ರಾಜ್ಯದಲ್ಲಿ ಲಾಕ್ಡೌನ್ ವಿಚಾರದಲ್ಲಿ ಕೇಂದ್ರ ಹಾಗೂ ತಜ್ಞರ ಸಲಹೆಯ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ತಜ್ಞರು ಕಠಿಣ ಕ್ರಮ ಸೇರಿದಂತೆ, ಏನೇ ಸಲಹೆ ಕೊಟ್ಟರೂ ಪಾಲಿಸುತ್ತೇವೆ. ಸದ್ಯಕ್ಕೆ ಬೇರೆ ರಾಜ್ಯದಷ್ಟು ಸಮಸ್ಯೆ ನಮ್ಮಲ್ಲಿ ಆಗಿಲ್ಲ. ಜನರು ಸಹಕಾರ ನೀಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಸಿಎಂ ತಜ್ಞರ ಸಭೆ ನಡೆಸುತ್ತಿದ್ದಾರೆ. 2ನೇ ಅಲೆಯಿಂದ ಆದ ಅನಾಹುತದಿಂದ ಜನರು ಎಚ್ಚೆತ್ತುಕೊಂಡಿದ್ದಾರೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಮಾಡಲು ಏನು ಕೆಲಸ ಇಲ್ಲ. ಪಾದಯಾತ್ರೆ ಒಂದು ಚುನಾವಣೆ ಗಿಮಿಕ್ಸ್. ಸಂಮ್ಮಿಶ್ರ ಸರ್ಕಾರ ಇದ್ದಾಗಲೂ ಯೋಜನೆ ಬಗ್ಗೆ ಮಾತನಾಡಲಿಲ್ಲ. ಜತೆಗೆ ಇಷ್ಟು ವರ್ಷ ಏನು ಮಾಡಲಿಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದು ಸಚಿವರು ಟಾಂಗ್ ನೀಡಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಕೊರೊನಾ ಸ್ಫೋಟ: ಜಿಪಂ ಸಿಇಒ ಸೇರಿ 35 ಮಂದಿಗೆ ವಕ್ಕರಿಸಿದ ಸೋಂಕು