ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿಯಾಗಿರುವುದು ಪಕ್ಷ ಸಂಘಟನೆ ವಿಚಾರವಾಗಿ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಇಂದು ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿಯಾಗಿರುವುದು ಪಕ್ಷ ಸಂಘಟನೆಗಾಗಿ.
ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿ ಭೇಟಿಯಾಗಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸುವುದು ಸಾಮಾನ್ಯ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
'ಸಚಿವನಾಗಿ ಬೆಳೆದಿರುವುದು ದೊಡ್ಡ ವಿಚಾರ'
ಇನ್ನೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಹೇಳಲು ನಾನು ಸಿಎಂ ಅಲ್ಲ, ಸಿಎಂ ಆಗುವ ಆಸೆಯೂ ನನಗೆ ಇಲ್ಲ. ನಾನು ಸರ್ಕಾರದಲ್ಲಿ ಸಹಕಾರ ಸಚಿವನಾಗಿ ಬೆಳೆದಿರುವುದು ದೊಡ್ಡ ವಿಚಾರ. ಇದರಲ್ಲೇ ತೃಪ್ತಿ ಇದೆ ಎಂದರು.
ಲಾಕ್ಡೌನ್ ಬಗ್ಗೆ ಸಿಎಂ ನಿರ್ಧಾರ:
ಲಾಕ್ಡೌನ್, ವೀಕೆಂಡ್ ಕರ್ಫ್ಯೂ ಹಿಂದೆ ಪಡೆಯುವುದು ಸಿಎಂ ಒಬ್ಬರ ನಿರ್ಧಾರವಲ್ಲ. ನಾಳೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅದರಲ್ಲಿ ತಜ್ಞರು, ಕೆಲವು ಸಚಿವರು ಸೇರಿ ನಿರ್ಧಾರ ಮಾಡುತ್ತಾರೆ. ಮೂರನೇ ಅಲೆ ದೊಡ್ಡ ಅಪಾಯಕಾರಿ ಅಲ್ಲ ಎಂದು ಗೊತ್ತಿದೆ.
ಆದರೆ, ಭವಿಷ್ಯದ ಅಪಾಯದ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನ ಸರ್ಕಾರ ತೆಗೆದುಕೊಂಡಿದೆ. ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಹಾಗೂ ಸಿ.ಟಿ ರವಿ ಜನರ ಅಭಿಪ್ರಾಯವನ್ನು ಸರ್ಕಾರದ ಮುಂದೆ ತಂದಿದ್ದಾರೆ. ಈ ಬಗ್ಗೆ ನಾಳೆ ನಡೆಯಲಿರುವ ಸಭೆಯಲ್ಲಿ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಫೆಬ್ರವರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ:
ಮೂರನೇ ಅಲೆ ಫೆಬ್ರವರಿ ಮೊದಲನೇ ವಾರದಲ್ಲಿ ಜೋರಾಗಲಿದ್ದು, ನಿತ್ಯ ಮೈಸೂರಿನಲ್ಲಿ ನಾಲ್ಕು ಸಾವಿರ ಪ್ರಕರಣಗಳು ದಾಖಲಾಗಲಿವೆ. ಆನಂತರ ಹಿಮ್ಮುಖವಾಗಲಿದೆ. ಈಗಾಗಲೇ ಮೈಸೂರಿನಲ್ಲಿ ಪೊಲೀಸರು, ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರಿಗೂ ಕೋವಿಡ್ ಸೋಂಕು ಬಂದಿದೆ. ಸೋಂಕು ಲಕ್ಷಣಗಳಿರುವವರು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದು, ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಬಗ್ಗೆ ಇಂದು ಸಂಜೆ ಸಭೆ ನಡೆಸಿ ಮೈಸೂರು ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದು, ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:ಜನರಿಗೆ ಕಷ್ಟ ಕೊಡುವುದು ನಮ್ಮ ಉದ್ದೇಶವಲ್ಲ, ವೀಕೆಂಡ್ ಕರ್ಫ್ಯೂ ವಿನಾಯಿತಿ ಬಗ್ಗೆ ನಾಳೆ ನಿರ್ಧಾರ : ಸುಧಾಕರ್