ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2021ರ ದಸರಾ ವೆಬ್ಸೈಟ್ ಅನ್ನು ಸಚಿವ ಎಸ್.ಟಿ. ಸೋಮಶೇಖರ್ ಅವರು, ಮೈಸೂರು ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ಇಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾವನ್ನು ಆಚರಣೆ ಮಾಡಲಾಗುತ್ತಿದೆ. ದಸರಾ ಕಾರ್ಯಕ್ರಮಗಳು ವರ್ಚುಯಲ್ ಆಗಿ ಪ್ರಸಾರವಾಗಲಿದೆ. ವೆಬ್ಸೈಟ್, ಯೂಟ್ಯೂಬ್, ಫೇಸ್ ಬುಕ್ನಲ್ಲಿ ಕಾರ್ಯಕ್ರಮಗಳು ನೇರಪ್ರಸಾರವಾಗಲಿದೆ ಎಂದು ಹೇಳಿದರು.
ದಸರಾ ವೆಬ್ಸೈಟ್ಗೆ ಚಾಲನೆ ನೀಡಿದ ಸಚಿವ ಸೋಮಶೇಖರ್ ಕನ್ನಡ, ಇಂಗ್ಲಿಷ್ನಲ್ಲಿ ಮಾಹಿತಿ ಲಭ್ಯ:
ಜಂಬೂ ಸವಾರಿ, ಮೆರವಣಿಗೆ, ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಮೈಸೂರು ಅರಮನೆ, ಮೃಗಾಲಯ ನಡೆದು ಬಂದ ಹಾದಿ ಸೇರಿದಂತೆ ಸಂಪೂರ್ಣ ವಿವರಗಳು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.
ದಸರಾ ಹಿನ್ನೆಲೆ, ಉದ್ಘಾಟಕರ ಪರಿಚಯ, ಉಪ ಸಮಿತಿಗಳ ವಿವರ, ಕಾರ್ಯಕ್ರಮಗಳ ಪಟ್ಟಿ, ಹಿಂದಿನ ದಸರಾ ಮಹೋತ್ಸವದ ಫೋಟೋ, ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರಲಿದೆ. ದೇಶಿ - ವಿದೇಶಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಗ್ಲಿಷ್ನಲ್ಲಿ ಕೂಡ ಮಾಹಿತಿ ಪ್ರಕಟಿಸಲಾಗಿದೆ ಎಂದರು.
ಇದನ್ನೂ ಓದಿ:Mysore Dussehra 2021: ಅರಮನೆ ದರ್ಬಾರ್ ಹಾಲ್ನಲ್ಲಿ ಚಿನ್ನದ ಸಿಂಹಾಸನ ಜೋಡಣೆ
ಕೋವಿಡ್ ಮೂರನೇ ಅಲೆ ಹಾಗೂ ಮೈಸೂರು ಜನತೆಯ ಹಿತದೃಷ್ಟಿಯಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಎಲ್ಲೂ ಕೂಡ ಕೋವಿಡ್ ನಿಯಮಗಳನ್ನು ಮೀರದಂತೆ ಸುರಕ್ಷಿತವಾಗಿ ದಸರಾ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.