ಮೈಸೂರು:ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಬರುತ್ತಿದ್ದೀರಿ, ಆದರೆ ನಿಮಗೆ ಧಮ್ ಇದ್ದರೆ ಮಸೀದಿಗೆ ಹೋಗಿ ಎಂದು ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾಗೆ ಸಚಿವ ಕೆ.ಎಸ್ ಈಶ್ವರಪ್ಪ ನೇರ ಸವಾಲು ಹಾಕಿದರು.
ಹಿಜಬ್ ಧರಿಸಿ ಅಧಿವೇಶನಕ್ಕೆ ಬರುವೆ ಎಂಬ ಕಾಂಗ್ರೆಸ್ ಶಾಸಕಿ ಹೇಳಿಕೆಗೆ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ಇಂದು ಕುಟುಂಬ ಸಮೇತ ಚಾಮುಂಡಿ ತಾಯಿಯ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಈಶ್ವರಪ್ಪ, ಹಿಜಾಬ್ ವಿವಾದ ಸಣ್ಣ ವಿಚಾರವಾಗಿದ್ದು, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ದೊಡ್ಡದು ಮಾಡಿದೆ. ಈ ವಿಚಾರದ ಬಗ್ಗೆ ಇಂದು ಕೋರ್ಟ್ನಲ್ಲಿ ತೀರ್ಪು ಬರಲಿದೆ. ಸಮವಸ್ತ್ರ ಕಡ್ಡಾಯದ ಬಗ್ಗೆ ಕೇರಳ ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ವನಾಶ:ಈ ವಿಚಾರ ಉಡುಪಿನಿಂದ ಆರಂಭವಾಗಿದ್ದು. ಹಿಂದೆ ಇಲ್ಲಿಂದಲೇ ಗೋಹತ್ಯೆ ನಿಷೇಧ ವಿಚಾರದಲ್ಲಿ ವಿವಾದ ಮಾಡಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಅದೇ ರೀತಿ, ಈ ಬಾರಿ ಹಿಜಾಬ್ ವಿವಾದ ಉಡುಪಿಯಿಂದಲೇ ಆರಂಭವಾಗಿದ್ದು, ಇದರಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದರು.
ಕಲಬುರಗಿ ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾ ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುತ್ತೇನೆ. ಯಾರು ತಡೆಯುತ್ತೀರಿ ಎಂಬ ಹೇಳಿಕೆ ಸರಿಯಲ್ಲ. ಏಕೆಂದರೆ ನೀವು ಈಗಲೂ ಹಿಜಾಬ್ ಧರಿಸಿಯೇ ಅಧಿವೇಶನಕ್ಕೆ ಬರುತ್ತಿದ್ದೀರಿ. ಅದನ್ನು ನಾವು ತಡೆಯುವುದಿಲ್ಲ. ನಿಮಗೆ ಧಮ್ ಇದ್ದರೆ ಮಹಿಳೆಯರಿಗೆ ಮಸೀದಿಗೆ ಪ್ರವೇಶ ಕಲ್ಪಿಸಿಕೊಡಿ ಎಂದು ಸವಾಲು ಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಒಲವು:ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಬಗ್ಗೆ ಪಂಚ ರಾಜ್ಯದ ಚುನಾವಣೆ ಮುಗಿಯುವವರೆಗೆ ಇಲ್ಲ ಎಂದು ಸಿಎಂ ಸ್ಪಷ್ಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮುಂದೆ ನಾನು ಮಂತ್ರಿಯಾಗಿರಬೇಕಾ, ಶಾಸಕನಾಗಿ ಇರಬೇಕಾ ಅಥವಾ ಪಕ್ಷದ ಕೆಲಸ ಮಾಡಬೇಕಾ? ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅದಕ್ಕೆ ನಾನು ಬದ್ದ. ಮುಂದಿನ ರಾಜ್ಯಾಧ್ಯಕ್ಷ ಸ್ಥಾನದ ಆಕ್ಷಾಂಕ್ಷಿ ನೀವಾ ಎನ್ನುವ ಪ್ರಶ್ನೆಗೆ, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ತಮ್ಮ ಆಶಯವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!