ಮೈಸೂರು: ಐಟಿ ಮತ್ತು ಇಡಿ ದಾಳಿಗಳನ್ನು ರಾಜಕೀಯ ಪ್ರೇರಿತ ಎಂದು ಟೀಕೆ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಜೆ.ಸಿ. ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.
ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯೆ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಪ್ರವಾಹ ಹಾಗೂ ಕೋವಿಡ್ ನಿರ್ವಹಣೆ ನಡುವೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಅದೇ ರೀತಿ ಈಗಿನ ಸರ್ಕಾರಕ್ಕೂ ಅದು ಸವಾಲಾಗಿದೆ. ಆದರೂ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಹಿರಿಯರು ಹಾಗೂ ಹೊಸಬರ ನೇತೃತ್ವದಲ್ಲಿ ಮಂತ್ರಿಮಂಡಲ ರಚನೆಯಾಗಿದೆ ಎಂದರು.
ಜಮೀರ್ ಮನೆಯ ಮೇಲೆ ಐಟಿ, ಇಡಿ ದಾಳಿ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಹೇಳುವುದು ಸರಿಯಲ್ಲ. ಸಿದ್ದರಾಮಯ್ಯ ನಂತವರು ಈ ರೀತಿ ಹೇಳುವುದು ತಪ್ಪು. ಕಾಂಗ್ರೆಸ್ನವರು ಈ ದೇಶವನ್ನು ಆಳಿದ್ದಾರೆ. ಅವರ ಕಾಲದಲ್ಲಿ ಈ ದುರುಪಯೋಗ ಆಗಿರಬಹುದು. ಹಾಗಾಗಿ ಇಂದು ಸಹ ದುರುಪಯೋಗ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದರು.
ಜಮೀರ್ಗೆ ಬೇಕಾದಷ್ಟು ವ್ಯವಹಾರಗಳಿವೆ. ಅದರ ಬಗ್ಗೆ ದಾಳಿ ಮಾಡಿ ತನಿಖೆ ನಡೆಸುವುದು ಸ್ವಾಯತ್ತ ಸಂಸ್ಥೆಗಳ ಕೆಲಸ ಅಷ್ಟೆ. ಈ ರೀತಿಯ ದಾಳಿಗಳಿಗೆ ಬೇರೆ ಬಣ್ಣ ಹಚ್ಚುವುದು, ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು. ಇದರಿಂದ ಸ್ವಾಯತ್ತ ಸಂಸ್ಥೆಗಳ ಗೌರವ ಉಳಿಯುವುದಿಲ್ಲ ಎಂದು ಹೇಳಿದರು.
ಸಂಪುಟದಲ್ಲಿ ಯಾವುದೇ ಖಾತೆಯನ್ನು ಸಿಎಂ ನೀಡಿದರೂ ಅದರಲ್ಲಿ ಕೆಲಸ ಮಾಡುತ್ತೇನೆ. ಸಣ್ಣ ನೀರಾವರಿ ಖಾತೆ ಬಗ್ಗೆ ಹಿಂದಿನ ಸರ್ಕಾರದಲ್ಲಿ ಆಸಕ್ತಿ ಇತ್ತು. ಆದರೆ ಈಗ ಹಾಗೇನೂ ಇಲ್ಲ. ಯಾವುದೇ ಖಾತೆ ಕೊಟ್ಟರು ನಿರ್ವಹಿಸುತ್ತೇನೆ ಎಂದು ಮಾಧುಸ್ವಾಮಿ ಹೇಳಿದರು.