ಮೈಸೂರು: ಜಿಲ್ಲೆಯಲ್ಲಿ ಸಂಭವಿಸಿರುವ ಮಳೆ ಹಾನಿ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜಿಲ್ಲೆಯ ಎಲ್ಲ ಶಾಸಕರು ಕೂಡ ಒಟ್ಟಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಳೆ ಹಾನಿ ಕುರಿತು ಅವರ ಗಮನಕ್ಕೆ ತರೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಜಿಪಂ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಆದ ಚರ್ಚೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸೋಣ:
ಮಳೆ ಹಾನಿ ಕುರಿತಂತೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲು ಜಿ.ಪಂ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಸಚಿವರು, ಮಳೆ ಹಾನಿಯಿಂದಾಗಿರುವ ನಷ್ಟ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸೋಣ ಎಂದರು.
ಪ್ರತಿ ಕ್ಷೇತ್ರಗಳಿಗೆ ಭೇಟಿ:
ಕೋವಿಡ್ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುವ ಸಂಬಂಧ ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಬೇಕು. ಶಾಸಕರು ಕೂಡ ಖುದ್ದು ಮೃತರ ಕುಟುಂಬದವರನ್ನು ಸಂಪರ್ಕಿಸಿ ಅವಶ್ಯಕ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ಮಾಹಿತಿ ನೀಡಬೇಕು. ಮೂರ್ನಾಲ್ಕು ದಿನಗಳಲ್ಲಿ ಪ್ರತಿ ಕ್ಷೇತ್ರಗಳಿಗೆ ಜಿಲ್ಲಾಧಿಕಾರಿ ಮತ್ತು ನಾವು ಕೂಡ ಭೇಟಿ ನೀಡುತ್ತೇವೆ ಎಂದು ಹೇಳಿದರು.
ಮಳೆ ಹಾನಿ:
ಜಿಲ್ಲೆಯಲ್ಲಿ ಮಳೆಯಿಂದ ಅಕ್ಟೋಬರ್ ತಿಂಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಐದು ಪ್ರಾಣಿಗಳು ಮೃತಪಟ್ಟಿವೆ. 1,249 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಇದರಲ್ಲಿ 34 ಮನೆಗಳು ಅಕ್ಟೋಬರ್ ನಲ್ಲೇ ಹಾನಿಗೊಳಗಾಗಿವೆ. 147.96 ಎಕರೆ ಬೆಳೆ ಹಾನಿ ಆಗಿದೆ. 214.97 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದ್ದರೆ, ಅಂದಾಜು 700 ಕಿ.ಮೀ.ನಷ್ಟು ರಸ್ತೆ ಹಾಳಾಗಿದೆ. 67 ಪ್ರಾಥಮಿಕ ಶಾಲೆಗಳು, 33 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಶಾಸಕರು ಗರಂ:
ಚರಂಡಿ ನೀರು ತಗ್ಗು ಪ್ರದೇಶ, ಮನೆಗಳಿಗೆ ನುಗ್ಗದಂತೆ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆಯಾಯಿತು. ಇದೇ ಸಂದರ್ಭದಲ್ಲಿ ಶಾಸಕ ಸಾ.ರಾ. ಮಹೇಶ್ ಹಾಗೂ ಎಲ್.ನಾಗೇಂದ್ರ ಅಧಿಕಾರಿಗಳ ವಿರುದ್ಧ ಗರಂ ಆದರು.
ಇದನ್ನೂ ಓದಿ:ಕಳ್ಳರನ್ನು ಸದೆಬಡಿದ ಕೊಡಗು ಪೊಲೀಸರು.. ವರ್ಷಗಳ ಬಳಿಕ ಮಾಲೀಕರ ಕೈ ಸೇರಿದ ಚಿನ್ನಾಭರಣ
ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಮಂಜುನಾಥ್, ಮಹದೇವ್, ಹರ್ಷವರ್ಧನ್, ಮುಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಅಧಿಕಾರಿಗಳು ಇದ್ದರು.