ಮೈಸೂರು: ಯುವಕನೊಬ್ಬ ತಾನು ಬೇಗ ಶ್ರೀಮಂತನಾಗಬೇಕೆಂಬ ಆಸೆಯಿಂದ ಖಾಸಗಿ ವಿಮಾ ಕಂಪನಿಗಳಲ್ಲಿ 5 ಕೋಟಿ ರೂ.ನ ಮರಣ ವಿಮೆ ಮಾಡಿಸಿ, ನಕಲಿ ಮರಣ ಪ್ರಮಾಣ ಪತ್ರ ಪಡೆದು ವಿಮೆ ಹಣಕ್ಕೆ ಅರ್ಜಿ ಸಲ್ಲಿಸಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ ವ್ಯಕ್ತಿ ಮೂಲತಃ ಉಡುಪಿಯವನಾಗಿದ್ದಾನೆ. ಮೈಸೂರು ಹಾಗೂ ಬೆಂಗಳೂರಿನಲ್ಲಿದ್ದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಚಾನಲ್ ಒಂದನ್ನು ನಡೆಸುತ್ತಿದ್ದಾನೆ ಎನ್ನಲಾಗಿದೆ. ಜೊತೆಗೆ ಈತ ಸಾಮಾಜಿಕ ಚಟುವಟಿಕೆಗಳಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿದ್ದ.
ಈತನಿಗೆ ಶ್ರೀಮಂತನಾಗಬೇಕೆಂಬ ಆಸೆಯಿದ್ದು, ಈ ಬಗ್ಗೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ. ನಂತರ ಅವನಿಗೆ ಮರಣ ವಿಮೆ ಮೂಲಕ ಹಣ ಪಡೆಯುವ ಯೋಚನೆ ಹುಟ್ಟಿಕೊಂಡಿದೆ. ನಂತರ ತಾನೇ ಸತ್ತಂತೆ ನಾಟಕವಾಡಿ ತನ್ನ ತಾಯಿಯ ಸಹಾಯ ಪಡೆದು ಅವರಿಂದ ನಕಲಿ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ವಿಮೆ ಹಣ ಪಡೆಯಲು ಅರ್ಜಿ ಸಲ್ಲಿಸಿ ಕೊನೆಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಈತ ಖಾಸಗಿ ವಿಮಾ ಕಂಪನಿಗಳೆರಡರಲ್ಲಿ 5 ಕೋಟಿ ರೂ. ಮೌಲ್ಯದ ಮರಣ ವಿಮೆ ಮಾಡಿಸಿ, ಕೆಲ ದಿನಗಳ ನಂತರ ತನ್ನ ತಾಯಿಯ ಬಳಿ ಈ ವಿಚಾರ ತಿಳಿಸಿ ಅವರ ಸಹಾಯ ಪಡೆದಿದ್ದಾನೆ. ತಾನು ಸತ್ತು ಹೋಗಿರುವಂತೆ ದಾಖಲೆಗಳನ್ನು ಸೃಷ್ಟಿಸಿಕೊಡುತ್ತೇನೆ, ಅದನ್ನು ಸ್ಥಳೀಯ ಪಂಚಾಯತ್‌ನಲ್ಲಿ ಸಲ್ಲಿಸಿ ಮರಣ ಪತ್ರ ಪಡೆದುಕೊಳ್ಳಿ ಎಂದು ಹೇಳಿದ್ದಾನೆ.
ಅದರಂತೆ ಆತನ ತಾಯಿಯು ಒಪ್ಪಿಗೆ ನೀಡಿದ್ದಾರೆ. ನಂತರ ಆತ ಹೃದಯಾಘಾತದಿಂದ ಮೃತಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದಾನೆ. ಅವರ ತಾಯಿ ಆ ದಾಖಲೆಯನ್ನು ಪಂಚಾಯತ್‌ಗೆ ಸಲ್ಲಿಸಿ ಮರಣ ಪ್ರಮಾಣ ಪತ್ರ ಪಡೆದು ಖಾಸಗಿ ವಿಮೆ ಕಂಪನಿಗಳಿಗೆ ಸಲ್ಲಿಸಿದ್ದಾರೆ.