ಮೈಸೂರು: ಚುನಾವಣೆ ಫಲಿತಾಂಶಕ್ಕೆ ಮುನ್ನವೇ ನಾನು ಸಿಎಂ ಎಂದು ಹೇಳುವುದು ಸರಿಯಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮೈಸೂರು, ಬೆಂಗಳೂರು, ಕಲಬುರಗಿಯಲ್ಲಿ ತೀರ್ಮಾನವಾಗುವುದಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವತ್ತಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ಯಾರಿಗೆ ನಾಯಕತ್ವ ಕೊಡಬೇಕು ಎಂಬುದನ್ನ ತೀರ್ಮಾನ ಮಾಡುತ್ತದೆ. ಈ ಬಾರಿ ಆ ಬಾರಿ ಅಂತಲ್ಲ, ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಮುಂದೆ ಸಾಗುತ್ತೆ. ಮೊದಲು ಪಕ್ಷವನ್ನ ಅಧಿಕಾರಕ್ಕೆ ತರಬೇಕು, ಅದೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಖರ್ಗೆ ಮರಳುವ ವಿಚಾರವಾಗಿ ಮಾತನಾಡಿ, ನೀವು ಅವಕಾಶ ಕೊಟ್ಟರೆ (ಮಾಧ್ಯಮದವರು) ಬರುತ್ತೇನೆ. ಎಲ್ಲಾ ಸೇರಿ ಚಾನ್ಸ್ ಕೊಟ್ಟರೆ ನೋಡೋಣ ಎಂದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ವಿಚಾರವಾಗಿ ಮಾತನಾಡಿ, ಈ ದೇಶಕ್ಕಾಗಿ ಮನೆಯವರನ್ನೇ ಕಳೆದುಕೊಂಡವರು ಒಂದು ಕೋಟಿ ರೂಪಾಯಿ ಅವ್ಯವಹಾರ ಮಾಡುತ್ತಾರೇನ್ರಿ. ಗಾಂಧಿ ಕುಟುಂಬವನ್ನ ವಿಚಾರಣೆಗೆ ಕರೆದ ಕೂಡಲೇ ನಾವು ಮಾನಸಿಕವಾಗಿ ಕುಗ್ಗುವುದಿಲ್ಲ. ಸ್ವತಂತ್ರ ಹೋರಾಟ, ಚಳವಳಿ, ತ್ಯಾಗ-ಬಲಿದಾನ ಮಾಡಿರುವ ಪಕ್ಷ ನಮ್ಮದು. ನಮ್ಮನ್ನ ಬಿಜೆಪಿಯವರು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಗಿಮಿಕ್ಗಳನ್ನ ಬಿಜೆಪಿ ಮಾಡುತ್ತಿದೆ ಎಂದು ಟಾಂಗ್ ನೀಡಿದರು.
ಚುನಾವಣಾ ರಾಜಕಾರಣದಿಂದ ಯಡಿಯೂರಪ್ಪ ನಿವೃತ್ತಿ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ, ಅದು ಅವರ ವೈಯಕ್ತಿಕ ನಿರ್ಧಾರ. ಅದರ ಬಗ್ಗೆ ನಾನೇನು ಮಾತನಾಡಲ್ಲ. ಎಲ್ಲರಿಗೂ ತಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ನಾವು ಯಾರೇ ಇರಲಿ, ಬಿಡಲಿ.. ದೇಶ ಅಂತೂ ಇರುತ್ತದೆ. ನಾನಿಲ್ಲದಿದ್ದರೆ ಇನ್ನೊಬ್ರು ಬರುತ್ತಾರೆ ಅಂತಾ ಯಡಿಯೂರಪ್ಪ ಯೋಚನೆ ಮಾಡರಿಬಹುದು ಎಂದರು.
ಇದನ್ನೂ ಓದಿ:ಪಕ್ಷದಲ್ಲಿ ಸಿಎಂ ಹುದ್ದೆಗೆ ಪೈಪೋಟಿ ನಡೆಯುತ್ತಿರುವುದು ಅಪ್ರಸ್ತುತ: ಸತೀಶ್ ಜಾರಕಿಹೊಳಿ