ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಮೈಸೂರಿಗೆ ಬರುತ್ತಿಲ್ಲ, ನಮಗಿರುವ ಮಾಹಿತಿ ಪ್ರಕಾರ ಸಚಿವ ಸೋಮಶೇಖರ್ ಸೇರಿದಂತೆ ಎಂಟು ಮಂದಿಯನ್ನು ಸಚಿವ ಸಂಪುಟದಿಂದ ತೆಗೆಯಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಚಿವರ ಬಗ್ಗೆ ಭವಿಷ್ಯ ನುಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಹಿಂದೆ ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು. ಆದರೆ ಈಗ ಯಾಕೋ ಜಿಲ್ಲೆಗೆ ಬರುತ್ತಿಲ್ಲ, ನಮಗೆ ತಿಳಿದಿರುವ ಪ್ರಕಾರ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ಎಂಟು ಮಂದಿ ಸಚಿವರನ್ನು ಸಂಪುಟದಿಂದ ತೆಗೆದುಹಾಕುತ್ತಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಅವರು ಮೈಸೂರು ಜಿಲ್ಲೆಗೆ ಬರುತ್ತಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.
ಭಾವನಾತ್ಮಕ ವಿಚಾರವನ್ನು ದೊಡ್ಡದು ಮಾಡಿ: ರಾಜ್ಯಕ್ಕೆ ಕೇಂದ್ರ ಗೃಹ ಅಮಿತ್ ಶಾ ಭೇಟಿ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಕೆಲವು ಸಂದೇಶಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಭಾವನಾತ್ಮಕ ವಿಚಾರ ದೊಡ್ಡದಾಗಿ ಬಿಂಬಿಸಿ ರಕ್ತಪಾತ ಮಾಡಿ, ಲಾಟಿ ಚಾರ್ಜ್, ಗೋಲಿ ಬಾರ್ ನಡೆಯಬೇಕಿದೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರ ಹಿಡಿಯಬೇಕಾಗಿದೆ ಇದು ದೊಡ್ಡ ಮಟ್ಟದಲ್ಲಿ ನಡೆಯಬೇಕು. ಇದೆಲ್ಲವನ್ನು ಕಾಂಗ್ರೆಸ್ ಪಕ್ಷದ ಮೇಲೆ ಹಾಕಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ. ಅದನ್ನು ಶತಾಯಗತಾಯ ಬಿಜೆಪಿಯವರು ಮಾಡುತ್ತಾರೆ. ಜನ ಬಿಜೆಪಿಯವರ ಪ್ರಚೋದನೆಗೆ ಒಳಗಾಗಬೇಡಿ, ನಿಮ್ಮ ತಲೆ ಮೇಲೆ ನೀವೇ ಚಪ್ಪಡಿಕಲ್ಲು ಹಾಕಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.