ಮೈಸೂರು: ದಿನದಿಂದ ದಿನಕ್ಕೆ ವಿಧಾನ ಪರಿಷತ್ ಚುನಾವಣೆ ಕಾವು ರಂಗೇರುತ್ತಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕಿದ್ದಾರೆ. ಈ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಮಪತ್ರದಲ್ಲಿ ಆಸ್ತಿ ಘೋಷಣೆ ಮಾಡಿದ್ದು, ಈ ಮೂಲಕ ಮೂರೂ ಪಕ್ಷಗಳ ಅಭ್ಯರ್ಥಿಗಳು ಕೋಟ್ಯಧಿಪತಿಗಳೇ ಆಗಿರುವುದು ಕಂಡುಬಂದಿದೆ.
ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ (56) ಒಟ್ಟು 5.30 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಬಳಿ 40 ಲಕ್ಷದ ಆಡಿ ( ಕ್ಯೂ7), 30 ಲಕ್ಷದ ಬಿಎಂಡಬ್ಲ್ಯೂ (3 ಸಿರೀಸ್) 22 ಲಕ್ಷದ ಹೊಂಡೈ ಕ್ರೇಟಾ, 5.5 ಲಕ್ಷದ ಷೆವ್ರೊಲೆ ಬೀಟ್, 24 ಲಕ್ಷದ ಟೊಯೋಟಾ ಫಾರ್ಚುನರ್ ಕಾರು, ಬೊಲೇರೋ ಪಿಕ್ ಅಪ್ ವಾಹನ, ಮಹೇಂದ್ರ ಮ್ಯಾಕ್ಸಿ ಟ್ರಕ್, ಟಾಟಾ 407 ವಾಟರ್ ಟ್ಯಾಂಕರ್, 2 ಬೈಕ್ ಗಳು ಹಾಗೂ ಪತ್ನಿ ಹೆಸರಲ್ಲಿ ಹೊಂಡೈ ವೆರ್ನಾ ಕಾರು ಇದೆ. ನಾಗಮ್ಮ ಚಾರಿಟಬಲ್ ಟ್ರಸ್ಟ್ನಿಂದ ನಡೆಸುತ್ತಿರುವ ಕಲ್ಯಾಣ ಮಂಟಪದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿ, ಆರೋಪ ಪಟ್ಟಿಯು ಸಲ್ಲಿಕೆಯಾಗಿದೆ.