ಮೈಸೂರು:ನಾಮಪತ್ರ ಸಲ್ಲಿಸಲು ನಾಳೆ (ಮಂಗಳವಾರ) ಅಂತಿಮ ದಿನವಾಗಿದ್ದು, ಬಿಜೆಪಿಯಲ್ಲಿ ಮಾತ್ರ ಅಭ್ಯರ್ಥಿ ಹೆಸರು ಘೋಷಣೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಹೆಸರು ಆಯ್ಕೆಯಾಗಿದ್ದು, ಇಂದು ಘೋಷಣೆಯಾಗಲಿದೆ.
ಮೈಸೂರು - ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಲಿದ್ದು, ಇದಕ್ಕಾಗಿ ಬಿಜೆಪಿಯಿಂದ ಕಳೆದ ಬಾರಿ, ಅಲ್ಪಮತಗಳಿಂದ ಪರಾಭವಗೊಂಡಿದ್ದ ರಘು ಕೌಟಿಲ್ಯ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಅವರು ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಹೆಸರು ಘೋಷಣೆಯಾಗುವ ಮುನ್ನವೇ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ನಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಅವರಿಗೆ ಟಿಕೆಟ್ ಸಿಗುವುದು ಕಷ್ಟ. ಈಗಾಗಲೇ ಕಳೆದ ವಾರ ಸಿದ್ದರಾಮಯ್ಯ ಮನೆಯಲ್ಲಿ ಸಭೆ ನಡೆಸಿ ಕಾಂಗ್ರೆಸ್ನಿಂದ ಡಾ.ತಿಮ್ಮಯ್ಯ ಅವರಿಗೆ ಟಿಕೆಟ್ ಅಂತಿಮವಾಗಿದ್ದು, ಘೋಷಣೆಯಷ್ಟೇ ಬಾಕಿಯಾಗಿದೆ.
ಜೆಡಿಎಸ್ನಿಂದ ಕಳೆದ ಬಾರಿ ಆಯ್ಕೆಯಾಗಿದ್ದ ಸಂದೇಶ್ ನಾಗರಾಜ್ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿ, ಕೊನೆಗೆ ಟಿಕೆಟ್ ಸಿಗದೇ ಅತಂತ್ರರಾಗಿರುವ ಅವರು, ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ.
ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾಗುತ್ತಿರುವ ಮಂಜೇಗೌಡ ಅವರು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದು, ಅವರಿಗೆ ಜೆಡಿಎಸ್ ಟಿಕೆಟ್ ಖಚಿತವಾಗಲಿದೆ. ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಎಷ್ಟು ನಾಮಪತ್ರಗಳು ಸಲ್ಲಿಕೆಯಾಗಲಿವೆ ಎಂಬುದು ಗೊತ್ತಾಗಲಿದೆ.
ಇಬ್ಬರು ಹಾಲಿಗಳಿಗೆ ಕೈ ತಪ್ಪಿದ ಟಿಕೆಟ್:
ಕಳೆದ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಮೊದಲ ಸುತ್ತಿನಲ್ಲೇ ಜಯ ಸಾಧಿಸಿದ್ದ ಕಾಂಗ್ರೆಸ್ನ ಹಾಲಿ ಪರಿಷತ್ ಸದಸ್ಯ ಆರ್.ಧರ್ಮಸೇನ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದೆ. ಅದೇ ರೀತಿ ಜೆಡಿಎಸ್ನಿಂದ ಕಳೆದ ಬಾರಿ ಟಿಕೆಟ್ ಪಡೆದು ಜಯ ಸಾಧಿಸಿದ್ದ ಸಂದೇಶ್ ನಾಗರಾಜ್ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಯತ್ನಿಸಿ, ಅಲ್ಲಿ ಟಿಕೆಟ್ ಸಿಗದೇ ಈಗ ಅತಂತ್ರರಾಗಿದ್ದಾರೆ.
ಈ ಮೂಲಕ ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಟಿಕೆಟ್ ಪಡೆದು ಜಯಶಾಲಿಯಾಗಿದ್ದ ಇಬ್ಬರು ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿಲ್ಲ. ಇಬ್ಬರು ಹೊಸ ಮುಖಗಳು ಈ ಬಾರಿಯ ಚಾಮರಾಜನಗರ ಮತ್ತು ಮೈಸೂರು ಪರಿಷತ್ ಸ್ಥಾನಕ್ಕೆ ಸ್ಪರ್ಧೆ ಮಾಡಿರುವುದು ವಿಶೇಷ.
ಇದನ್ನೂ ಓದಿ:ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ : ಸಿಎಂ ಬಸವರಾಜ ಬೊಮ್ಮಾಯಿ