ಮೈಸೂರು: ರಸಗೊಬ್ಬರ ಬೆಲೆ ಏರಿಕೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೋಮುಖ ವ್ಯಾಘ್ರ ನಡವಳಿಕೆ ಮಾಡುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
ಯಾವುದೇ ಕಾರಣಕ್ಕೂ ರಸಗೊಬ್ಬರ ಬೆಲೆ ಏರಿಕೆ ಮಾಡುವುದಿಲ್ಲ. ಹಳೆಯ ದರದಲ್ಲಿಯೇ ರಸಗೊಬ್ಬರಗಳು ಮಾರಾಟವಾಗುತ್ತದೆ. ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಲೇ ಕೇಂದ್ರ ಸಚಿವ ಸದಾನಂದ ಗೌಡ ಹಾಗು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರನ್ನು ಮೋಸಗೊಳಿಸಿದ್ದಾರೆ.
ಹೊಸ ದರ ನಿಗದಿಯಾಗಿದೆ. ಡಿಎಪಿ ಪ್ರತಿ ಚೀಲಕ್ಕೆ 1,200 ರಿಂದ 1,900 ಏರಿಕೆ ಮಾಡಲಾಗಿದೆ. ಹೊಸ ದರ ನಿಗದಿ ಮಾಡಿ ರಸಗೊಬ್ಬರ ಕಂಪನಿಗಳು ಆದೇಶ ಹೊರಡಿಸಿವೆ. ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಹಣ್ಣು, ತರಕಾರಿಗಳನ್ನು ಬೀದಿಯಲ್ಲಿ ಸುರಿಯುತ್ತಿದ್ದಾರೆ. ಖರೀದಿದಾರರು ಇಲ್ಲದ ಕಾರಣ ಕೆಲವು ರೈತರು ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಸಾಲ ಮಾಡಿದ ರೈತ ಅಂಗೈಯಲ್ಲಿ ಆಕಾಶ ನೋಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.