ಮೈಸೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಕೊಡಿ, ಐದು ವರ್ಷದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇನೆ, ಇಲ್ಲದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಶಪಥ ಮಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಇಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಲಧಾರೆ ಕಾರ್ಯಕ್ರಮದ ವಾಹನಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದು ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ಮುಂದಿನ ಬಾರಿ ಅಧಿಕಾರ ನೀಡಿ, ಯೋಜನೆಗಳನ್ನು ಜಾರಿಗೆ ತರದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಚಾಮುಂಡೇಶ್ವರಿ ತಾಯಿಯ ಮುಂದೆ ಶಪಥ ಮಾಡಿದ್ದೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ. ಈ ಬಾರಿ 30 ರಿಂದ 40 ಸ್ಥಾನಕ್ಕಾಗಿ ಹೋರಾಟ ಅಲ್ಲ, ಬದಲಾಗಿ ಪೂರ್ಣ ಪ್ರಮಾಣದ ಸರ್ಕಾರ ತರಲು ಈ ಹೋರಾಟ. ಧರ್ಮ- ಧರ್ಮಗಳ ನಡುವೆ ಬೆಂಕಿ ಹಚ್ಚಲು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ನನ್ನ ಹೋರಾಟ ಎಂದು ಹೇಳಿದ್ದಾರೆ.
ಮೇಕೆದಾಟುವಿಗೆ ಪರ್ಯಾಯ ಯಾತ್ರೆ ಅಲ್ಲ: ಜನತಾ ಜಲಧಾರೆ ಯಾತ್ರೆ ಇದು ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಪರ್ಯಾಯವಲ್ಲ. ಅದು ಶೋಕಿಗಾಗಿ ನಡೆಸಿದ ಯಾತ್ರೆ. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡುವ ಯಾತ್ರೆ. ಈ ಮೂಲಕ ಜೆಡಿಎಸ್ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದು, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಜನತಾ ಜಲಧಾರೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಸಿ.ಟಿ. ರವಿ ಹೇಳಿಕೆಗೆ ತಿರುಗೇಟು: ಕಲ್ಲಂಗಡಿ ಹೊಡೆದಾಗ ತೋರಿದ ಅನುಕಂಪ ತಲೆ ಹೊಡೆದಾಗ ಏಕೆ ತೋರಲಿಲ್ಲ ಎಂಬ ಸಿ ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ ಡಿ ಕುಮಾರಸ್ವಾಮಿ, ನಿಮ್ಮ ಮಾತಿನ ಅರ್ಥ ಏನು, ನಾವು ರಾಜ್ಯದಲ್ಲಿ ತಲೆ ಒಡೆಯುತ್ತಲೇ ಇರುತ್ತೇವೆ, ನೀವು ಸಾಂತ್ವನ ಹೇಳುತ್ತಲೇ ಇರಿ ಎನ್ನುವ ಹಾಗಿದೆ ಅವರ ಮಾತಿನ ಅರ್ಥ ಎಂದು ತಿರುಗೇಟು ನೀಡಿದರು.