ಮೈಸೂರು: ನಿಂದನೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ಆಶಾ ಕಾರ್ಯಕರ್ತೆಯ ಆರೋಗ್ಯವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಚಾರಿಸಿದರು.
ಶ್ರೀರಂಗಪಟ್ಟಣದ ತಾಲೂಕಿನ ಗ್ರಾಮವೊಂದರಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೀನಾಕ್ಷಿ ಎಂಬ ಆಶಾ ಕಾರ್ಯಕರ್ತೆಗೆ ಅದೇ ಗ್ರಾಮದ ಕೆಲ ವ್ಯಕ್ತಿಗಳು ನಿಂದಿಸಿದ್ದರು. ಇದರಿಂದ ಮನನೊಂದು ಮಾತ್ರೆ ಸೇವಿಸಿ ಡೆತ್ ನೋಟ್ ಬರದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಿಳೆಯ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ದೇವರ ದಯೆಯಿಂದ ಹಣ್ಣುಮಗು ಬದುಕಿಕೊಂಡಿದ್ದಾಳೆ. ಆದರೆ ಮಾನಸಿಕ ಒತ್ತಡದಿಂದ ಹೊರ ಬಂದಿಲ್ಲ ಕೌನ್ಸೆಲಿಂಗ್ ಮಾಡಬೇಕು ಎಂದು ವೈದ್ಯರು ಹೇಳಿದ್ದಾಗಿ ತಿಳಿಸಿದರು.
ಆಶಾ ಕಾರ್ಯಕರ್ತೆಯ ಆರೋಗ್ಯ ವಿಚಾರಿಸಿದ ಹೆಚ್.ಡಿ.ಕೆ ಹೆಣ್ಣುಮಗಳು ತನ್ನ ಈ ಸ್ಥಿತಿಗೆ ಕಾರಣರಾದವರ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿದ್ದಾರೆ, ಅದನ್ನು ತಹಶೀಲ್ದಾರರಿಗೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ಒತ್ತಡಗಳಿವೆ. ಅಲ್ಲದೆ ಆರೋಪಿಗಳನ್ನು ಪೊಲೀಸರು ಠಾಣೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಮ್ಯಾಜಿಸ್ಟ್ರೇಟ್ರನ್ನು ಕೇಳಿದಾಗ 3ನೇ ವರೆಗೂ ಜುಡಿಷಿಯಲ್ ಕಸ್ಟಡಿಯಲ್ಲಿ ಇರಲಿ ಎಂದಿದ್ದಾಗಿ ತಿಳಿಸಿದರು. ಆದರೂ ಸ್ಟೇಷನ್ ಬೇಲ್ ಕೊಡುವುದಕ್ಕೆ ಹಲವಾರು ರೀತಿಯ ರಾಜಕೀಯ ಒತ್ತಡ ಬಂದಿವೆ. ನಾನು ಅವರ ಹೆಸರುಗಳನ್ನು ಹೇಳುವುದಿಲ್ಲ ಎಂದರು.
ಅಧಿಕಾರಿಗಳು ಇರುವುದು ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುವುದಕ್ಕೋ, ಅಥವಾ ರಾಜಕಾರಣಿಗಳ ಒತ್ತಡಕ್ಕೆ ಅಧಿಕಾರಿಗಳಾಗಿದ್ದಾರೋ. ಅದರ ಜೊತೆಗೆ ಮಂಡ್ಯ ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ದೂರು ಕೊಡಬೇಡಿ ಎಂಬ ವರ್ತನೆ ತೋರಿದ್ದಾರೆ, ಇವರೆಲ್ಲಾ ಅಧಿಕಾರಿಗಳಾ ಎಂದು ಕಿಡಿಕಾರಿದರು.